IMG_20140623_0006

ನಾನು ಪದ್ಯಗಳನ್ನು ಬರೆಯಲು ಪ್ರಾರಂಭಿಸಿದ ಕಾಲದಲ್ಲಿ ನವ್ಯ ಕಾವ್ಯ ಉತ್ಕರ್ಷದಲ್ಲಿತ್ತು. ಭಾವಗೀತೆಗಳನ್ನು ಕೇಳುವವರು ವಿರಳವಾಗಿದ್ದರು. ಆಗ ಅವುಗಳಿಗೆ ಅಂಥ ವಿಶೇಷ ಚಲಾವಣೆ ಇಲ್ಲದಿದ್ದರೂ ಸಹ ಗೀತ ಗುಂಗು ನನ್ನನ್ನು ಬಿಡಲಿಲ್ಲ. ನನಗೆ ಅನ್ನಿಸಿದ್ದನ್ನೆಲ್ಲಾ ನಾನು ಬರೆಯುತ್ತಲೇ ಬಂದೆ.

ನನ್ನ ಬರವಣೀಗೆಗೆ ಕನ್ನಡ ನವೋದಯ ಪರಂಪರೆಯ ಹಿರಿಯ ಕವಿಗಳ ಅತ್ಯುತ್ತಮ ಭಾವಗೀತೆಗಳೇ ಪ್ರೇರಣೆ. ಈ ಕೃತಿ ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ ಆ ಮಹಾನ್ ಚೇತನಗಳನ್ನು ಮನಸಾರೆ ಸ್ಮರಿಸುತ್ತೇನೆ.
ಪ್ರಕೃತಿ, ಪ್ರೀತಿ, ಸಾಮಾಜಿಕ ಪ್ರಜ್ಞೆ ಮತ್ತು ಆಧ್ಯಾತ್ಮ ನನ್ನ ಗೀತೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಸ್ತು. ಅದಕ್ಕೆ ಕಾರಣ ನನ್ನ ಭಾವುಕ ಅಂತರಂಗ. ನನ್ನ ಮನೋಧರ್ಮದಲ್ಲಿ ಅಚಲವಾಗಿ ನೆಲೆಸಿರುವ ನಿಸರ್ಗದ ಆಋಆಧನೆ ಹಾಗೂ ಪ್ರೇಮ ಕಾರಂಜಿ ಜೊತೆಗೆ ಸಮಾಜದ ಬಗೆಗಿನ ಆರೋಗ್ಯಕರ ಕಳಕಳಿ ಹಾಗೂ ನಮಗೆ ಮೀರಿದ ಅತ್ಯದ್ಬುತವಾದ ಜಗತ್ತನ್ನು ರೂಪಿಸಿದ ಮಹಾನ್ ಶಕ್ತಿ ಈ ಸ್ಪೂರ್ತಿಯನ್ನು ನೀಡಿವೆ. ಉತ್ಕಟವಾದ ನನ್ನ ಭಾವ ವಾಹಿನಿಯು ನಿರಂತರವಾಗಿ ಹರಿಯುತ್ತಲೇ ಬಂದಿದೆ.

ಇಲ್ಲಿ ಸಂಕಲಿತವಾಗಿರುವ ಬಹಳಷ್ಟು ಕವಿತೆಗಳು ಈ ಬಗೆಯವು. ನಾನು ಬರವಣಿಗೆಯಲ್ಲಿ ಹೆಚ್ಚು ಹೆಚ್ಚು ನಿಮಗ್ನವಾದಷ್ಟೂ ಎಂಥದೋ ಒಂದು ಆಂತರಿಕ ಲಯಗಾರಿಕೆ ಗುನುಗಾಗಿ ಕಾಡುತ್ತಾ ನಾನು ಹಾಡಿಕೊಳ್ಳುತ್ತಲೇ ಗೀತೆಯನ್ನು ಬರೆಯುತ್ತೇನೆ. ಇದನ್ನು ಸಹೃದಯರು ಗುರ್ತಿಸುತ್ತಾರೆಂಬುದು ನನ್ನ ನಂಬಿಕೆ. ಕಾವ್ಯಾಭಿಮಾನಿಗಳು ನನ್ನ ಈ ಕೃತಿಯನ್ನು ಮನಃಪೂರ್ವಕವಾಗಿ ಸ್ವೀಕರಿಸಿ, ಪ್ರತಿಕ್ರಿಯಿಸಬೇಕಾಗಿ ಅರಿಕೆ.

– ಡಾ. ದೊಡ್ಡರಂಗೇಗೌಡ