ಐ.ಪಿ.ಆರ್.ಎಸ್. ನಲ್ಲಿ 02 ಆಗಸ್ಟ್ 1992 ರಿಂದಲೂ ಗೌರವ ಸದಸ್ಯರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದ ರನ್ನ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಗುರುತರ ಜವಾಬ್ದಾರಿ ನಿರ್ವಹಿಸಿದ್ದಾರೆ. 1990-2000 ದ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಗೌರವ ತೀರ್ಪುಗಾರರಾಗಿ (ಜ್ಯೂರಿ) ಕಾರ್ಯ ನಿರ್ವಹಿಸಿದ್ದಾರೆ. ಇದರಲ್ಲಿಯೇ ಅಧ್ಯಕ್ಷರಾಗಿ ಒಂದು ಸಾರಿ ಸರ್ಕಾರಕ್ಕೆ ಶ್ರೇಷ್ಠ ಕನ್ನಡ ಚಿತ್ರಗಳ ಆಯ್ಕೆ ಮಾಡಿ ಕೊಟ್ಟಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದಿಂದ 2005-06 ಸಾಲಿನ ಕನ್ನಡ ಚಲನಚಿತ್ರಗಳಿಗೆ ಉತ್ತಮ ಗುಣಮಟ್ಟದ ಚಿತ್ರಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. 1981 ರಿಂದ 2003 ರವರೆಗೆ ಶ್ರೀ ಲ.ನ. ಕಲೆ, ವಾಣಿಜ್ಯ, ವಿಜ್ಞಾನ ನಹಾವಿದ್ಯಾಲಯದ ಗೌರ್ನಿಂಗ್ ಕೌನ್ಸಿಲ್‌ನ ಸದಸ್ಯರಾಗಿದ್ದರು.

1972 ರಿಂದಲೂ ಚೈತ್ರ ಸಾಹಿತ್ಯಿಕ ಸಂಚಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಾ ಸೃಜನಶೀಲ ಸಾಹಿತ್ಯದ ಪ್ರಕಟಣೆಗೆ ನಿರಂತರ ಶ್ರಮಿಸಿದ್ದಾರೆ.

ನಾಡಿನಾದ್ಯಂತ ಜನಪದ ಸಾಹಿತ್ಯ ಸಂಗ್ರಹಿಸುತ್ತಾ ಮಣ್ಣಿನ ಮಕ್ಕಳ ಮೌಲ್ಯಯುಕ್ತ ತವನಿಧಿಯ ಶೋಧನೆಯಲ್ಲಿ ಸತತವಾಗಿ ಕಾರ್ಯ ಮಗ್ನರಾಗಿದ್ದಾರೆ.

ಅಂಕುರ, ಶಕ್ತಿಕೊಡು ಪ್ರಭುವೆ, ಕಾಡು ಮಲ್ಲಿಗೆ, ಶ್ರೀ ಸನ್ನಿಧಿ, ವಾತ್ಸಲ್ಯ ಗೀತೆ, ಭೂಮಿ ಬಾನು, ಸಿರಿ, ಸಂವರ್ಧನ, ನಲ್ಮೆ-ನೇಸರ ಮೂಂತಾದ 10 ಧ್ವನಿಸುರುಳಿಗಳಲ್ಲಿ ಸ್ವತಃ ಗೌಡರೇ ಹಾಡುವ ಮೂಲಕ ಸುಗಮ ಸಮಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕಲಾತ್ಮಕ ಕಾಣಿಕೆಯನ್ನೂ ನೀಡಿದ್ದಾರೆ.

ತೋರುಗಂಬ, ಜ್ಞಾನ ಬಾಗಿನ, ಕರಾಣಿಕ ಶಿಶು ಬಸವಣ್ಣ – ಕನ್ನಡ ಕಥನ ಕವನಗಳು ಮುಂತಾದ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

15 ಆಗಸ್ಟ್ 2003 ರಿಂದ ಎಸ್.ಇ.ಟಿ. ಗೌರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

10 ಮಾರ್ಚ್ 2004 ರಿಂದ 3 ಅಕ್ಟೋಬರ್ 2006 ರ ವರೆಗೆ ಆದಿಚುಂಚನಗಿರಿ ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿ ಕನ್ನಡ ಹಾಗೂ ಆಂಗ್ಲ ಭಾಷಾ ಮಾಸಪತ್ರಿಕೆಯ ಸಂಪಾದಕರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.

1999 ರಿಂದ 2004 ಫೆಬ್ರುವರಿ 29 ರವರೆಗೂ ಎಲ್.ಎಲ್.ಎನ್. ಪಿ.ಯು. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.

ಸಿರಿ – ಸಂವರ್ಧನ, ನಲ್ಮೆ – ನೇಸರ ಧ್ವನಿ ಸುರುಳಿಗಳಿಗೆ ಸಾಹಿತ್ಯ ರಚಿಸಿರುವುದರ ಜೊತೆಗೆ ಸ್ವರ ಸಂಯೋಜನೆಯನ್ನೂ ಸ್ವತಃ ಗೌಡರೇ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. ಜೊತೆಗೆ ಕೇರಾಫ್ ಫುಟ್ಪಾತ್, ಮ್ಯಾಡ್ ಲವ್, ನಾಡಿನ ಕಲಿಗಳು ಮತ್ತು ತಾರೆ ಎಂಬ ಚಲನಚಿತ್ರಗಳಲ್ಲಿ ಗೌರವ ಪಾತ್ರಗಳಲ್ಲಿ ನಟಿಸಿ ನಟನೆಯಲ್ಲೂ ತಮ್ಮ ಕಲಾವಂತಿಕೆಯನ್ನು ಮೆರೆದಿದ್ದಾರೆ.

ದೇಶಾದ್ಯಂತ ಸಾಹಿತ್ಯಕ ಉಪನ್ಯಾಸಗಳನ್ನು ನೀಡುತ್ತಾ, ಪರೋಕ್ಷವಾಗಿ ಕನ್ನಡ – ಕರ್ನಾಟಕದ ರಾಯಭಾರಿಯಂತೆ ಸಾವಿರಾರು ಸಮಾರಂಭಗಳಲ್ಲಿ ಪಾಲ್ಗೊಂಡು ನಾಡು ನುಡಿಯ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸಿದ್ದಾರೆ. ತನ್ಮೂಲಕ ಕರ್ನಾಟಕ ರಾಜ್ಯದಲ್ಲಿ ಅಪೂರ್ವ ರೀತಿಯಲ್ಲಿ ಕನ್ನಡ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ಎ.ಎಚ್. ಹೌಸ್ ಕಮಿಟಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ ಅಧೀನ ಶಾಸನ ರಚನಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಾ ಕನ್ನಡ ಸೇವೆನ್ನು ಮಾಡುತ್ತಿದ್ದಾರೆ.