IMG_20140623_0008

ಕಾವ್ಯ ಮಾನವೀಯ ಸಂವೇದನೆಗಳನ್ನು ಅಭಿವ್ಯಕ್ತಿಗೊಳಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ. ಕಾವ್ಯ, ರೂಪವಿಲ್ಲದ ಭಾವನೆಗಳಿಗೆ ಶಬ್ದಾತ್ಮಕ ರೂಪ ನೀಡುತ್ತದೆ, ಲಯ ನೀಡುತ್ತದೆ, ಗತಿ ನೀಡುತ್ತದೆ.
ಕಾವ್ಯ ರಚನಾಕಾರನೊಂದಿಗೆ, ಕೇಳುಗನನ್ನು, ಓದುಗನನ್ನು ಯಾವ ಕಾವ್ಯ ತನ್ನ ಪ್ರಭಾವದೊಂದಿಗೆ ಬಂಧಿಸುತ್ತದೆಯೋ ಹಾಗೂ ಪರಿವರ್ತನೆಗೊಳಿಸುತ್ತದೆಯೋ ಅಂಥ ಕಾವ್ಯ ಮಾತ್ರ ತನ್ನ ಸಾರ್ಥಕತೆಯನ್ನು ಪ್ರಾಮಾಣಿಕಗೊಳಿಸುತ್ತದೆಂದು ನಾನು ಭಾವಿಸಿದ್ದೇನೆ. ಕವಿಮಿತ್ರ ಡಾ. ದೊಡ್ಡರಂಗೇಗೌಡ ಕಾವ್ಯದಲ್ಲಿ ಇಂಥ ಸಾರ್ಥಕತೆಯನ್ನು ಕಂಡಿದ್ದೇನೆ.
ಈ ಕವಿತೆಗಳು ನಮ್ಮನ್ನು ನಂದನ – ನಿಕುಂಜಗಳಲ್ಲಿ ವಿಹರಿಸುವಂತೆ ಮಾಡುತ್ತವೆ. ಇಲ್ಲಿಯ ಗೀತೆಗಳು ರಮ್ಯ – ಸುರಮ್ಯವಾಗಿವೆ. ಸ್ವಚ್ಚ ಸಲಿಲದಿಂದ ತುಂಬಿದ ಸರೋವರವಿದ್ದ ಹಾಗಿವೆ ಇವು. ಮಾಧುರ್ಯದ ಮಂಗಲ ಸಲಿಲದಲ್ಲಿ ಮೈಯೊಡ್ಡುವಂತೆ ಮಾಡುತ್ತವೆ. ಇವುಗಳ ಓದಿನಿಂದ ಸೌಂದರ್ಯದ ಶಿವಪ್ರಜ್ಞೆ ಜಾಗ್ರತವಾಗುತ್ತದೆ.
ಕವಿ ದೊಡ್ಡರಂಗೇಗೌಡರ ಅದ್ಬುತ ಪ್ರತಿಭೆಯ ಸ್ರೋತ ನಮ್ಮನ್ನು ಮುಗ್ದಗೊಳಿಸುತ್ತದೆ. ಸೌಂದರ್ಯದ ಶಿವ ಪ್ರಜ್ಞೆಯ ಸಾಕ್ಷಾತ್ಕಾರ ಮಡಿಸುತ್ತದೆ. ಶಿವಮನದವನಿಗೆ, ಶಿವದೃಷ್ಟಿಯಿದ್ದವನಿಗೆ, ಸತ್ಯವೂ ಶಿವ, ಶಿವವೂ ಶಿವ, ಸುಂದರವೂ ಶಿವ ಎಂಬ ಪ್ರಜ್ಞೆ ಇದ್ದವನಿಗೆ ಇಲ್ಲಿಯ ಚೆಲುವಿನ, ಮಧುರ ಆಸ್ವಾದನೆಯಿಂದ ಆಂತರಿಕ ಬದುಕು ಸುಮಧುರವಾಗುತ್ತದೆ.
ಕವಿ ತಾನು ಪಡೆದ ಅನುಭವ ಅನುಭೂತಿಯ ಮೌಕ್ತಿಕಗಳನ್ನು ಇಲ್ಲಿ ಶಬ್ದದ ಅಂತಃಶ್ಚೇತನದ ಸಿಂಪಿಯಲ್ಲಿ ಹುದುಗಿಸಿಟ್ಟು ರಸಿಕರಿಗೆ ನೀಡಿದ್ದಾನೆ. ಅದರ ಮೇಲಿನ ಮುಚ್ಚಳವನ್ನು ತೆರೆದು ಮುತ್ತಿನ ಚೆಲುವನ್ನು ಆಸ್ವಾದಿಸುವ ಕಲೆಯನ್ನು ರಸಿಕ ಕರಗತ ಮಾಡಿಕೊಳ್ಳಬೇಕು, ಅಷ್ಟೇ.
– ಡಾ. ಪಂಚಾಕ್ಷರಿ ಹಿರೇಮಠ