ಶಿಕ್ಷಣ, ಸಾಹಿತ್ಯ, ಚಲನಚಿತ್ರ, ಸುಗಮ ಸಂಗೀತ… ಹೀಗೆ ಹಲವು ಕ್ಷೇತ್ರಗಳಲ್ಲಿ ಏಕ ಕಾಲದಲ್ಲಿ ತಮ್ಮ ಪ್ರತಿಭೆಯನ್ನು ತೊಡಗಿಸಿಕೊಂಡ ಸೃಜನಶೀಲರು – ಕವಿ ದೊಡ್ಡರಂಗೇಗೌಡ ಅವರು.

ನಿರಂತರವಾಗಿ ಮೌಲಿಕ ಪುಸ್ತಕಗಳ ಪ್ರಕಟಣೆ, ನಾಡು ನುಡಿಯ ಹಿರಿಮೆಯ ಬಗೆಗೆ ಪ್ರಬುದ್ಧ ಉಪನ್ಯಾಸಗಳ ನೀಡಿಕೆ, ಸಾಹಿತ್ಯಕ, ಸಾಸ್ಕೃತಿಕ ಪರಿಚಾರಿಕೆ, ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳುವಿಕೆ, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆ – ಇವು ಡಾ.ದೊಡ್ಡರಂಗೇಗೌಡರ ಬದುಕಿನ ಜೀವಂತಿಕೆ.

ದೊಡ್ಡರಂಗೇಗೌಡರು ಕುರುಬರ ಹಳ್ಳಿ, ಬಡವನ ಹಳ್ಳಿ, ಮಧುಗಿರಿ, ತುಮಕೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ1970 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಆನರ್ಸ್ ಪದವಿ, 1972 ರಲ್ಲಿ ಎಂ.ಎ. ಪದವಿ ಪಡೆದರು. ಜಾನಪದ ವಿಶೇಷ ಅಧ್ಯಯನ ; 2004 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ನವೋದಯ ಕಾವ್ಯ : ಒಂದು ಪುನರ್ ಮೌಲ್ಯಮಾಪನ ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದರು.

1972ರ ಜೂನ್ 18 ರಂದು ಬೆಂಗಳೂರು ನಗರದ ಎಸ್.ಎಲ್.ಎನ್. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದ ದೊಡ್ಡರಂಗೇಗೌಡರು, 1980 ರಲ್ಲಿ ಕನ್ನಡ ಪ್ರವಾಚಕರಾದರು.

1985ರಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, 1990 ರಿಂದ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ 2002 ರಲ್ಲಿ ನಿವೃತ್ತರಾಗಿದ್ದಾರೆ. ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಗೌರವ ನಿದರ್ೇಶಕರಾಗಿ ಸೇವೆ ಸಲ್ಲಿಸಿರುವ ಗೌಡರು ವಿಧಾನ ಪರಿಷತ್ನ ಸದಸ್ಯರೂ ಹೌದು.

ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದ ಡಾ. ದೊಡ್ಡರಂಗೇಗೌಡರು ಇದುವರೆಗೂ ಸುಮಾರು 80 ವಿವಿಧ ರೀತಿಯ ಕೃತಿಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಗೊಳಸಿದ್ದಾರೆ. ಹಾಗೆಯೇ 500ಕ್ಕೂ ಹೆಚ್ಚು ಕನ್ನಡ ಚಿತ್ರಗೀತೆಗಳನ್ನೂ ಬರೆದು ಕನ್ನಡಿಗರ ಮನೆ ಮಾತಾಗಿದ್ದಾರೆ.