IMG_20140623_0003

‘ಮಣ್ಣಿನ ಮಗ ನಾನು ಮಂಕುತಿಮ್ಮನ ಶಿಷ್ಯ
ಕಣ್ಣು ಕಂಡಂತೆಲ್ಲಾ ಬರೆಯುವೆನು ಭಾವಭಾಷ್ಯ
… ಬಣ್ಣಿಸಲು ಮಾತೆಲ್ಲಾ ರಮ್ಯ ಕಾವ್ಯ‘

ಲೋಕ ಜೀವನದ ವಿವಿಧ ಮುಖಗಳನ್ನೂ, ವ್ಯವಹಾರಗಳನ್ನೂ, ಸಾಂಸಾರಿಕ ಜೀವನವನ್ನೂ, ರಾಜಕೀಯ ಸ್ಥಿತಿಗತಿಗಳನ್ನೂ, ಬಡವರನ್ನೂ, ಬಡತನವನ್ನೂ… ಬಹು ಹತ್ತಿರದಿಂದ ಕಂಡಿರುವವರು ಚಿಂತನಶೀಲ ಕವಿಗಳಾದ ಡಾ. ದೊಡ್ಡರಂಗೇಗೌಡರು.
ಅವರ ‘ಮಣ್ಣಿನ ಮಾತುಗಳು‘ ಕೃತಿ ಇದಕ್ಕೆ ಪುಷ್ಠಿ ಕೊಡುತ್ತದೆ. ಇವರು ಸಾಮಾಜಿಕ ಹಿತಚಿಂತಕರಾಗಿರುವುದರ ಜೊತೆಗೆ ತಮ್ಮ ಮಾಗಿದ ಪ್ರಾಪಂಚಿಕ ಅಣುಭವಗಳಿಂದ ಅನುಭಾವಿಗಳಾಗಿ ಆಧ್ಯಾತ್ಮಿಕ ಔನ್ಯತ್ಯಕ್ಕೇರಿ ನಿಂತವರೂ ಆಗಿರುವುದರಿಂದ ಅನುಭಾವಿಕ ಸಾಹಿತ್ಯದ ಹಿನ್ನೆಲೆಯೂ ಇಲ್ಲಿ ದಟ್ಟವಾಗಿದೆ.
ದಾರ್ಶನಿಕತೆ ಹಾಗೂ ಆತ್ವಿಕತೆಯ ತನಿ ಸ್ಪರ್ಶವೂ ಇಲ್ಲಿ ನೋಡ ಸಿಗುತ್ತದೆ. ಹಾಗಾಗಿ ಇವರು ‘ಬಣ್ಣಿಸುವ ಮಾತೆಲ್ಲ ರಮ್ಯ ಕಾವ್ಯ‘ವಾಗಿರುವುದರಲ್ಲಿ ಸಂದೇಹವಿಲ್ಲ. ‘ನಾನು ದಿನಕರ ದೇಸಾಯಿ ಹಾಗೂ ಡಿ.ವಿ.ಜಿ.ಯವರ ಪ್ರೇರಣೆಯಿಂದ ಮಣ್ಣಿನ ಮಾತುಗಳನ್ನು ಬರೆಯುತ್ತಾ ಬಂದೆ‘. ಎಂದು ಹೇಳೀರುವ ಗೌಡರಿಗೆ ಅವರಲ್ಲಿರುವ ಪ್ರಾಪಂಚಿಕ ಅಪಾರ ಅನುಭವಕ್ಕೆ ಈ ಇಬ್ಬರ ಪ್ರೇರನೆಗಳು ಸಾಪೇಕ್ಷವಾಗಿ, ಪೋಷಕವಾಗಿ ನಿಲ್ಲುತ್ತವೆ.. ಅಷ್ಟೇ.
ಬಾಳನ್ನು ಅವ್ಯಾಜವಾಗಿ ಪ್ರೀತಿಸುತ್ತಾ ಜೀವನವನ್ನು ಸಾಗಿಸಿಕೊಂಡು ಬಂದಿರುವ ಈ ಕವಿಗೆ ಬಾಳ ದಾರಿಯಲ್ಲಿ ಎದುರಾಗುವ ಎಡರು ತೊಡರುಗಳನ್ನು ಎದುರಿಸುವ, ಎದುರಿಸಿರುವ ಜಾಣ್ಮೆ ಸಹಿಷ್ಣುತೆ ಗುಣಗಳು ಅಪಾರ.
ಈ ಎಲ್ಲಾ ಬಾಳ ಸಿರಿಯನ್ನು ಹೊತ್ತಿರುವ ಈ ಕೃತಿಯಲ್ಲಿನ ಚೌಪದಿಗಳನ್ನು ಮುಕ್ತಕಗಳೆನ್ನಬಹುದು, ಸುಭಾಷಿತಗಳೆನ್ನಬಹುದು, ಚುಟುಕಗಳೆನ್ನಬಹುದು. ಏನೇ ಆಗಿರಲಿ, ಈ ಚೌಪದಿಗಳ ಅಂತರಾಳದಲ್ಲಿ ಅಡಗಿರುವ ಸತ್ವ ಮನುಜನ ಸುಖ ಸಂತೋಷದ ಸುಗಮ ಬಾಳಿಗೆ ಒಂದೊಂದೂ ಅಮೃತ ಫಲಗಳಾಗಿವೆ.
ಕಗ್ಗದಷ್ಟು ಕ್ಲಿಷ್ಟವಿರದೆ, ಚುಟುಕಗಳಷ್ಟು ಸರಳವಿರದೆ, ಇವು ತಮ್ಮದೇ ಆದ ಸಶಕ್ತ ಭಾಷಾ ಶೈಲಿಯಿಂದ ತಮ್ಮ ಅಂತಃಸ್ವತ್ವವನ್ನು ಸಮರ್ಥವಾಗಿ ಸಮುದ್ಭವಿಸುತ್ತವೆ. ಇಲ್ಲಿ ಸಮಸಷ್ಠಿ ಪ್ರಜ್ಞೆ ಇದೆ. ನೀತಿಬೋಧೆ ಇದೆ. ಶುದ್ದ ಬಾಳಿಗೆ ದಿವ್ಯ ಸೂತ್ರವಿದೆ. ಕೆಡುಕು ದುಡುಕುಗಳ ಬಗ್ಗೆ ಎಚ್ಚರವಿದೆ. ದುಗುಡ ದುಮ್ಮಾನಗಳಿಗೆ ಸಮಾಧಾನವಿದೆ.
ಒಟ್ಟಾರೆ ಈ ಕೃತಿ ಫಲಭರಿತ ಪಾದಪದಂತೆ ನೈಜವಾಗಿ ಒಡಮೂಡಿ ನಿಂತಿದೆ. ಕವಿಯ ಪ್ರತಿಭಾ ಶ್ರಮಕ್ಕೆ ಇಲ್ಲಿ ಸಾರ್ಥಕತೆ ಸಂದಿದೆ. ಹೀಗಾಗಿ ಅವರಿಗೆ ಧನ್ಯತೆಯೂ ಪ್ರಾಪ್ತವಾಗಿದೆ.

– ಬೇಡರೆಡ್ಡಿಹಳ್ಳಿ ಪಂಪಣ್ಣ