Categoryಕೃತಿಗಳು

ಭಾವ ಭಾಸ್ಕರ

ದೊಡ್ಡರಂಗೇಗೌಡರ ಸಾಮಾಜಿಕ ಪ್ರಜ್ಞೆ

IMG_20140623_0011ಆಧುನಿಕ ಕನ್ನಡ ಕಾವ್ಯಕ್ಷೇತ್ರದಲ್ಲಿ ಡಾ. ದೊಡ್ಡರಂಗೇಗೌಡರದು ದೊಡ್ಡ ಹೆಸರು. ಇವರೊಬ್ಬ ಅಸಾಧಾರಣ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಗೌಡರು ಅತ್ಯಂತ ಜನಪ್ರಿತಯ ಕವಿ ಎಂಬುದು ವಿಶೇಷ. ಕಾವ್ಯ ಕ್ಷೇತ್ರವನ್ನೇ ನಿರ್ದಿಷ್ಟವಾಗಿ ಇಟ್ಟುಕೊಂಡು ಹೋಗುವುದಾದರೆ ಗೌಡರಂಥ ಇನ್ನೊಬ್ಬ ಕವಿ ಕನ್ನಡದಲ್ಲಿ ಇಲ್ಲವೇ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. Continue reading

ನೀಳ್ಗೀತೆಗಳು

IMG_20140623_0005ಅನಾದಿ ಕಾಲದಿಂದಲೂ ಕಾವ್ಯ ಜಗತ್ತಿನಲ್ಲಿ ಸುದೀರ್ಘವಾಗಿ, ಸರಿತೆಯಾಗಿ ಹರಿವ ಜನಪದ ಗೀತೆಗಳು ಸಮೃದ್ಧವಾಗಿವೆ. ಅನಂತರದಲ್ಲಿ ಅವುಗಳಿಂದ ಸ್ಫೂರ್ತಿ ಪಡೆದ ಮಹಾ ಕಾವ್ಯಗಳು ಮೂಡಿ ಬಂದಿವೆ; ಇತ್ತೀಚಿಗೆ ಅಂಥ ಬರಹಗಳೇ ಅಪರೂಪವಾಗುತ್ತಿವೆ.
ಈ ಆಧುನಿಕ ಕಾಲದಲ್ಲೂ “ನೀಳ್ಗೀತೆಗಳ”ನ್ನು ಸಮೃದ್ಧವಾಗಿ ಬರೆಯುತ್ತಾ ಬಂದ ಕವಿಗಳಲ್ಲಿ ನಮ್ಮ ಪ್ರೀತಿಯ ಪ್ರೊಫೆಸರ‍್ ದೊಡ್ಡರಂಗೇಗೌಡರೂ ಒಬ್ಬರು.
ಅರವತ್ತನೇ ಇಸವಿಯಲ್ಲೇ ’ಮೂರ್ತಿ ತಂದಿತ್ತು ಕೀರ್ತಿ’ ಎಂಬ ನೀಳ್ಗೀತೆಯಿಂದ ಪ್ರಸಿದ್ಧಿಗೆ ಬಂದ ಡಾ|| ದೊಡ್ಡರಂಗೇ ಗೌಡರ ಇತ್ತೀಚಿನ ’ಸಾಲ್ಮರದ ನೀಳ್ಗೀತೆ’ವರೆಗೆ ಅವರು ಅಸಂಖ್ಯ ’ಪ್ರಗಾಥ’ಗಳನ್ನು ಬರೆದಿದ್ದಾರೆ.
ಅವುಗಳಲ್ಲಿ ಕೆಲವನ್ನು ಈ ಪುಸ್ತಕದಲ್ಲಿ ಪರಿಚಯಿಸಿ ಸಹೃದಯರ ಕೈಗೆ ಕೊಡಲಾಗಿದೆ.

ಬೀರೇಶ್ವರ ಪ್ರಕಾಶನ, ಮಧುಗಿರಿ :

M: 99645 56171

ಕಾಡು… ಕಣಿವೆ… ಕಡಲು…

IMG_20140623_0008

ಕಾವ್ಯ ಮಾನವೀಯ ಸಂವೇದನೆಗಳನ್ನು ಅಭಿವ್ಯಕ್ತಿಗೊಳಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ. ಕಾವ್ಯ, ರೂಪವಿಲ್ಲದ ಭಾವನೆಗಳಿಗೆ ಶಬ್ದಾತ್ಮಕ ರೂಪ ನೀಡುತ್ತದೆ, ಲಯ ನೀಡುತ್ತದೆ, ಗತಿ ನೀಡುತ್ತದೆ.
ಕಾವ್ಯ ರಚನಾಕಾರನೊಂದಿಗೆ, ಕೇಳುಗನನ್ನು, ಓದುಗನನ್ನು ಯಾವ ಕಾವ್ಯ ತನ್ನ ಪ್ರಭಾವದೊಂದಿಗೆ ಬಂಧಿಸುತ್ತದೆಯೋ ಹಾಗೂ ಪರಿವರ್ತನೆಗೊಳಿಸುತ್ತದೆಯೋ ಅಂಥ ಕಾವ್ಯ ಮಾತ್ರ ತನ್ನ ಸಾರ್ಥಕತೆಯನ್ನು ಪ್ರಾಮಾಣಿಕಗೊಳಿಸುತ್ತದೆಂದು ನಾನು ಭಾವಿಸಿದ್ದೇನೆ. ಕವಿಮಿತ್ರ ಡಾ. ದೊಡ್ಡರಂಗೇಗೌಡ ಕಾವ್ಯದಲ್ಲಿ ಇಂಥ ಸಾರ್ಥಕತೆಯನ್ನು ಕಂಡಿದ್ದೇನೆ.
ಈ ಕವಿತೆಗಳು ನಮ್ಮನ್ನು ನಂದನ – ನಿಕುಂಜಗಳಲ್ಲಿ ವಿಹರಿಸುವಂತೆ ಮಾಡುತ್ತವೆ. ಇಲ್ಲಿಯ ಗೀತೆಗಳು ರಮ್ಯ – ಸುರಮ್ಯವಾಗಿವೆ. ಸ್ವಚ್ಚ ಸಲಿಲದಿಂದ ತುಂಬಿದ ಸರೋವರವಿದ್ದ ಹಾಗಿವೆ ಇವು. ಮಾಧುರ್ಯದ ಮಂಗಲ ಸಲಿಲದಲ್ಲಿ ಮೈಯೊಡ್ಡುವಂತೆ ಮಾಡುತ್ತವೆ. ಇವುಗಳ ಓದಿನಿಂದ ಸೌಂದರ್ಯದ ಶಿವಪ್ರಜ್ಞೆ ಜಾಗ್ರತವಾಗುತ್ತದೆ.
ಕವಿ ದೊಡ್ಡರಂಗೇಗೌಡರ ಅದ್ಬುತ ಪ್ರತಿಭೆಯ ಸ್ರೋತ ನಮ್ಮನ್ನು ಮುಗ್ದಗೊಳಿಸುತ್ತದೆ. ಸೌಂದರ್ಯದ ಶಿವ ಪ್ರಜ್ಞೆಯ ಸಾಕ್ಷಾತ್ಕಾರ ಮಡಿಸುತ್ತದೆ. ಶಿವಮನದವನಿಗೆ, ಶಿವದೃಷ್ಟಿಯಿದ್ದವನಿಗೆ, ಸತ್ಯವೂ ಶಿವ, ಶಿವವೂ ಶಿವ, ಸುಂದರವೂ ಶಿವ ಎಂಬ ಪ್ರಜ್ಞೆ ಇದ್ದವನಿಗೆ ಇಲ್ಲಿಯ ಚೆಲುವಿನ, ಮಧುರ ಆಸ್ವಾದನೆಯಿಂದ ಆಂತರಿಕ ಬದುಕು ಸುಮಧುರವಾಗುತ್ತದೆ.
ಕವಿ ತಾನು ಪಡೆದ ಅನುಭವ ಅನುಭೂತಿಯ ಮೌಕ್ತಿಕಗಳನ್ನು ಇಲ್ಲಿ ಶಬ್ದದ ಅಂತಃಶ್ಚೇತನದ ಸಿಂಪಿಯಲ್ಲಿ ಹುದುಗಿಸಿಟ್ಟು ರಸಿಕರಿಗೆ ನೀಡಿದ್ದಾನೆ. ಅದರ ಮೇಲಿನ ಮುಚ್ಚಳವನ್ನು ತೆರೆದು ಮುತ್ತಿನ ಚೆಲುವನ್ನು ಆಸ್ವಾದಿಸುವ ಕಲೆಯನ್ನು ರಸಿಕ ಕರಗತ ಮಾಡಿಕೊಳ್ಳಬೇಕು, ಅಷ್ಟೇ.
– ಡಾ. ಪಂಚಾಕ್ಷರಿ ಹಿರೇಮಠ

ಮಣ್ಣಿನ ಮಾತುಗಳು

IMG_20140623_0003

‘ಮಣ್ಣಿನ ಮಗ ನಾನು ಮಂಕುತಿಮ್ಮನ ಶಿಷ್ಯ
ಕಣ್ಣು ಕಂಡಂತೆಲ್ಲಾ ಬರೆಯುವೆನು ಭಾವಭಾಷ್ಯ
… ಬಣ್ಣಿಸಲು ಮಾತೆಲ್ಲಾ ರಮ್ಯ ಕಾವ್ಯ‘

ಲೋಕ ಜೀವನದ ವಿವಿಧ ಮುಖಗಳನ್ನೂ, ವ್ಯವಹಾರಗಳನ್ನೂ, ಸಾಂಸಾರಿಕ ಜೀವನವನ್ನೂ, ರಾಜಕೀಯ ಸ್ಥಿತಿಗತಿಗಳನ್ನೂ, ಬಡವರನ್ನೂ, ಬಡತನವನ್ನೂ… ಬಹು ಹತ್ತಿರದಿಂದ ಕಂಡಿರುವವರು ಚಿಂತನಶೀಲ ಕವಿಗಳಾದ ಡಾ. ದೊಡ್ಡರಂಗೇಗೌಡರು.
ಅವರ ‘ಮಣ್ಣಿನ ಮಾತುಗಳು‘ ಕೃತಿ ಇದಕ್ಕೆ ಪುಷ್ಠಿ ಕೊಡುತ್ತದೆ. ಇವರು ಸಾಮಾಜಿಕ ಹಿತಚಿಂತಕರಾಗಿರುವುದರ ಜೊತೆಗೆ ತಮ್ಮ ಮಾಗಿದ ಪ್ರಾಪಂಚಿಕ ಅಣುಭವಗಳಿಂದ ಅನುಭಾವಿಗಳಾಗಿ ಆಧ್ಯಾತ್ಮಿಕ ಔನ್ಯತ್ಯಕ್ಕೇರಿ ನಿಂತವರೂ ಆಗಿರುವುದರಿಂದ ಅನುಭಾವಿಕ ಸಾಹಿತ್ಯದ ಹಿನ್ನೆಲೆಯೂ ಇಲ್ಲಿ ದಟ್ಟವಾಗಿದೆ.
ದಾರ್ಶನಿಕತೆ ಹಾಗೂ ಆತ್ವಿಕತೆಯ ತನಿ ಸ್ಪರ್ಶವೂ ಇಲ್ಲಿ ನೋಡ ಸಿಗುತ್ತದೆ. ಹಾಗಾಗಿ ಇವರು ‘ಬಣ್ಣಿಸುವ ಮಾತೆಲ್ಲ ರಮ್ಯ ಕಾವ್ಯ‘ವಾಗಿರುವುದರಲ್ಲಿ ಸಂದೇಹವಿಲ್ಲ. ‘ನಾನು ದಿನಕರ ದೇಸಾಯಿ ಹಾಗೂ ಡಿ.ವಿ.ಜಿ.ಯವರ ಪ್ರೇರಣೆಯಿಂದ ಮಣ್ಣಿನ ಮಾತುಗಳನ್ನು ಬರೆಯುತ್ತಾ ಬಂದೆ‘. ಎಂದು ಹೇಳೀರುವ ಗೌಡರಿಗೆ ಅವರಲ್ಲಿರುವ ಪ್ರಾಪಂಚಿಕ ಅಪಾರ ಅನುಭವಕ್ಕೆ ಈ ಇಬ್ಬರ ಪ್ರೇರನೆಗಳು ಸಾಪೇಕ್ಷವಾಗಿ, ಪೋಷಕವಾಗಿ ನಿಲ್ಲುತ್ತವೆ.. ಅಷ್ಟೇ.
ಬಾಳನ್ನು ಅವ್ಯಾಜವಾಗಿ ಪ್ರೀತಿಸುತ್ತಾ ಜೀವನವನ್ನು ಸಾಗಿಸಿಕೊಂಡು ಬಂದಿರುವ ಈ ಕವಿಗೆ ಬಾಳ ದಾರಿಯಲ್ಲಿ ಎದುರಾಗುವ ಎಡರು ತೊಡರುಗಳನ್ನು ಎದುರಿಸುವ, ಎದುರಿಸಿರುವ ಜಾಣ್ಮೆ ಸಹಿಷ್ಣುತೆ ಗುಣಗಳು ಅಪಾರ.
ಈ ಎಲ್ಲಾ ಬಾಳ ಸಿರಿಯನ್ನು ಹೊತ್ತಿರುವ ಈ ಕೃತಿಯಲ್ಲಿನ ಚೌಪದಿಗಳನ್ನು ಮುಕ್ತಕಗಳೆನ್ನಬಹುದು, ಸುಭಾಷಿತಗಳೆನ್ನಬಹುದು, ಚುಟುಕಗಳೆನ್ನಬಹುದು. ಏನೇ ಆಗಿರಲಿ, ಈ ಚೌಪದಿಗಳ ಅಂತರಾಳದಲ್ಲಿ ಅಡಗಿರುವ ಸತ್ವ ಮನುಜನ ಸುಖ ಸಂತೋಷದ ಸುಗಮ ಬಾಳಿಗೆ ಒಂದೊಂದೂ ಅಮೃತ ಫಲಗಳಾಗಿವೆ.
ಕಗ್ಗದಷ್ಟು ಕ್ಲಿಷ್ಟವಿರದೆ, ಚುಟುಕಗಳಷ್ಟು ಸರಳವಿರದೆ, ಇವು ತಮ್ಮದೇ ಆದ ಸಶಕ್ತ ಭಾಷಾ ಶೈಲಿಯಿಂದ ತಮ್ಮ ಅಂತಃಸ್ವತ್ವವನ್ನು ಸಮರ್ಥವಾಗಿ ಸಮುದ್ಭವಿಸುತ್ತವೆ. ಇಲ್ಲಿ ಸಮಸಷ್ಠಿ ಪ್ರಜ್ಞೆ ಇದೆ. ನೀತಿಬೋಧೆ ಇದೆ. ಶುದ್ದ ಬಾಳಿಗೆ ದಿವ್ಯ ಸೂತ್ರವಿದೆ. ಕೆಡುಕು ದುಡುಕುಗಳ ಬಗ್ಗೆ ಎಚ್ಚರವಿದೆ. ದುಗುಡ ದುಮ್ಮಾನಗಳಿಗೆ ಸಮಾಧಾನವಿದೆ.
ಒಟ್ಟಾರೆ ಈ ಕೃತಿ ಫಲಭರಿತ ಪಾದಪದಂತೆ ನೈಜವಾಗಿ ಒಡಮೂಡಿ ನಿಂತಿದೆ. ಕವಿಯ ಪ್ರತಿಭಾ ಶ್ರಮಕ್ಕೆ ಇಲ್ಲಿ ಸಾರ್ಥಕತೆ ಸಂದಿದೆ. ಹೀಗಾಗಿ ಅವರಿಗೆ ಧನ್ಯತೆಯೂ ಪ್ರಾಪ್ತವಾಗಿದೆ.

– ಬೇಡರೆಡ್ಡಿಹಳ್ಳಿ ಪಂಪಣ್ಣ

ಪ್ರಕೃತಿ ಮತ್ತು ಪುರುಷ

IMG_20140623_0002ಪ್ರಕೃತಿ – ಅನಾದಿ, ಅನಂತ; ಪುರುಷ – ಸಾಹಸಿ, ಕಾರ್ಯಪ್ರವೃತ್ತ. ಎಲ್ಲಿ ಪ್ರಕೃತಿ ರಮ್ಯ, ಅಲ್ಲಿ ಪುರುಷನ ಗಮನವೂ ಅನನ್ಯ. ಪ್ರಕೃತಿ ಅಸೀಮಾಮುಖಿ. ಸೃಜನಶೀಲೆ; ಪುರುಷ – ತಂಟೆಕೋರ; ಚಲನಶೀಲ; ಹೊಸ ಹೊಸದನ್ನು ಮೂಡಿಸಬಲ್ಲ. ಕ್ಷಣಾರ್ಧದಲ್ಲಿ ಮೂಡಿಸಿದ್ದ – ನಾಶ ಮಾಡಲೂ ಬಲ್ಲ! ಪ್ರಕೃತಿ – ಮಾತೆ, ಸೃಷ್ಟಿದಾತೆ, ಒಂದನ್ನು ಅಗಣಿತವಾಗಿಸಬಲ್ಲ ಚೈತನ್ಯದಾಯಿ!… ಆಕೆಯ ಎದುರೆದುರೇ ಪುರುಷನ ಅಖಂಡ ಹೋರಾಟ. ಆ ಎಲ್ಲವೂ ಇಲ್ಲಿ ದಾಖಲಿತ.