Categoryಜೀವನ ಚರಿತ್ರೆ

ವಿವಿಧ ಸಂಘ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ನಿರ್ವಹಣೆ

ಐ.ಪಿ.ಆರ್.ಎಸ್. ನಲ್ಲಿ 02 ಆಗಸ್ಟ್ 1992 ರಿಂದಲೂ ಗೌರವ ಸದಸ್ಯರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದ ರನ್ನ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಗುರುತರ ಜವಾಬ್ದಾರಿ ನಿರ್ವಹಿಸಿದ್ದಾರೆ. 1990-2000 ದ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಗೌರವ ತೀರ್ಪುಗಾರರಾಗಿ (ಜ್ಯೂರಿ) ಕಾರ್ಯ ನಿರ್ವಹಿಸಿದ್ದಾರೆ. ಇದರಲ್ಲಿಯೇ ಅಧ್ಯಕ್ಷರಾಗಿ ಒಂದು ಸಾರಿ ಸರ್ಕಾರಕ್ಕೆ ಶ್ರೇಷ್ಠ ಕನ್ನಡ ಚಿತ್ರಗಳ ಆಯ್ಕೆ ಮಾಡಿ ಕೊಟ್ಟಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದಿಂದ 2005-06 ಸಾಲಿನ ಕನ್ನಡ ಚಲನಚಿತ್ರಗಳಿಗೆ ಉತ್ತಮ ಗುಣಮಟ್ಟದ ಚಿತ್ರಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. 1981 ರಿಂದ 2003 ರವರೆಗೆ ಶ್ರೀ ಲ.ನ. ಕಲೆ, ವಾಣಿಜ್ಯ, ವಿಜ್ಞಾನ ನಹಾವಿದ್ಯಾಲಯದ ಗೌರ್ನಿಂಗ್ ಕೌನ್ಸಿಲ್‌ನ ಸದಸ್ಯರಾಗಿದ್ದರು.

1972 ರಿಂದಲೂ ಚೈತ್ರ ಸಾಹಿತ್ಯಿಕ ಸಂಚಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಾ ಸೃಜನಶೀಲ ಸಾಹಿತ್ಯದ ಪ್ರಕಟಣೆಗೆ ನಿರಂತರ ಶ್ರಮಿಸಿದ್ದಾರೆ.

ನಾಡಿನಾದ್ಯಂತ ಜನಪದ ಸಾಹಿತ್ಯ ಸಂಗ್ರಹಿಸುತ್ತಾ ಮಣ್ಣಿನ ಮಕ್ಕಳ ಮೌಲ್ಯಯುಕ್ತ ತವನಿಧಿಯ ಶೋಧನೆಯಲ್ಲಿ ಸತತವಾಗಿ ಕಾರ್ಯ ಮಗ್ನರಾಗಿದ್ದಾರೆ.

ಅಂಕುರ, ಶಕ್ತಿಕೊಡು ಪ್ರಭುವೆ, ಕಾಡು ಮಲ್ಲಿಗೆ, ಶ್ರೀ ಸನ್ನಿಧಿ, ವಾತ್ಸಲ್ಯ ಗೀತೆ, ಭೂಮಿ ಬಾನು, ಸಿರಿ, ಸಂವರ್ಧನ, ನಲ್ಮೆ-ನೇಸರ ಮೂಂತಾದ 10 ಧ್ವನಿಸುರುಳಿಗಳಲ್ಲಿ ಸ್ವತಃ ಗೌಡರೇ ಹಾಡುವ ಮೂಲಕ ಸುಗಮ ಸಮಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕಲಾತ್ಮಕ ಕಾಣಿಕೆಯನ್ನೂ ನೀಡಿದ್ದಾರೆ.

ತೋರುಗಂಬ, ಜ್ಞಾನ ಬಾಗಿನ, ಕರಾಣಿಕ ಶಿಶು ಬಸವಣ್ಣ – ಕನ್ನಡ ಕಥನ ಕವನಗಳು ಮುಂತಾದ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

15 ಆಗಸ್ಟ್ 2003 ರಿಂದ ಎಸ್.ಇ.ಟಿ. ಗೌರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

10 ಮಾರ್ಚ್ 2004 ರಿಂದ 3 ಅಕ್ಟೋಬರ್ 2006 ರ ವರೆಗೆ ಆದಿಚುಂಚನಗಿರಿ ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿ ಕನ್ನಡ ಹಾಗೂ ಆಂಗ್ಲ ಭಾಷಾ ಮಾಸಪತ್ರಿಕೆಯ ಸಂಪಾದಕರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.

1999 ರಿಂದ 2004 ಫೆಬ್ರುವರಿ 29 ರವರೆಗೂ ಎಲ್.ಎಲ್.ಎನ್. ಪಿ.ಯು. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.

ಸಿರಿ – ಸಂವರ್ಧನ, ನಲ್ಮೆ – ನೇಸರ ಧ್ವನಿ ಸುರುಳಿಗಳಿಗೆ ಸಾಹಿತ್ಯ ರಚಿಸಿರುವುದರ ಜೊತೆಗೆ ಸ್ವರ ಸಂಯೋಜನೆಯನ್ನೂ ಸ್ವತಃ ಗೌಡರೇ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. ಜೊತೆಗೆ ಕೇರಾಫ್ ಫುಟ್ಪಾತ್, ಮ್ಯಾಡ್ ಲವ್, ನಾಡಿನ ಕಲಿಗಳು ಮತ್ತು ತಾರೆ ಎಂಬ ಚಲನಚಿತ್ರಗಳಲ್ಲಿ ಗೌರವ ಪಾತ್ರಗಳಲ್ಲಿ ನಟಿಸಿ ನಟನೆಯಲ್ಲೂ ತಮ್ಮ ಕಲಾವಂತಿಕೆಯನ್ನು ಮೆರೆದಿದ್ದಾರೆ.

ದೇಶಾದ್ಯಂತ ಸಾಹಿತ್ಯಕ ಉಪನ್ಯಾಸಗಳನ್ನು ನೀಡುತ್ತಾ, ಪರೋಕ್ಷವಾಗಿ ಕನ್ನಡ – ಕರ್ನಾಟಕದ ರಾಯಭಾರಿಯಂತೆ ಸಾವಿರಾರು ಸಮಾರಂಭಗಳಲ್ಲಿ ಪಾಲ್ಗೊಂಡು ನಾಡು ನುಡಿಯ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸಿದ್ದಾರೆ. ತನ್ಮೂಲಕ ಕರ್ನಾಟಕ ರಾಜ್ಯದಲ್ಲಿ ಅಪೂರ್ವ ರೀತಿಯಲ್ಲಿ ಕನ್ನಡ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ಎ.ಎಚ್. ಹೌಸ್ ಕಮಿಟಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ ಅಧೀನ ಶಾಸನ ರಚನಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಾ ಕನ್ನಡ ಸೇವೆನ್ನು ಮಾಡುತ್ತಿದ್ದಾರೆ.

ಸಾಹಿತ್ಯ ಸಂಸ್ಕೃತಿಯ ಪರಿಚಾರಕರಾಗಿ ಡಾ. ದೊಡ್ಡರಂಗೇಗೌಡರ ವಿದೇಶಿ ಪ್ರವಾಸಗಳು

ಜೈ ಭಾರತ್ ವಿದ್ಯಾ ಸಂಸ್ಥೆಯ ವತಿಯಿಂದ 1997 ರಲ್ಲಿ ನೇಪಾಳ ಪ್ರವಾಸ ಮಾಡಿ 21 ದಿನಗಳ ಕಾಲ ಅಲ್ಲಿನ ಸಾಹಿತ್ಯಾತ್ಮಕ, ಸಾಸ್ಕೃತಿಕ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

1997 ರಲ್ಲಿ ಶ್ರೀ ಆದಿಚುಂಚನಗಿರಿ ಅಂತರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆ ಫ್ಲಿಂಟ್ – ಮಿಷಿಗನ್ (ಯು.ಎಸ್.ಎ.) – ಇದರ ಪ್ರಾಯೋಜಕತ್ವದಲ್ಲಿ ಡಾ.ದೊಡ್ಡರಂಗೇಗೌಡರು ತಮ್ಮ ಧರ್ಮಪತ್ನಿ ಡಾ. ಕೆ. ರಾಜೇಶ್ವರಿ ಗೌಡ ಅವರ ಜೊತೆಯಲ್ಲೇ ಇಂಗ್ಲೆಂಡ್, ಅಮೇರಿಕಾ, ಜರ್ಮನಿ ದೇಶಗಳಲ್ಲಿ 47 ದಿನಗಳು ಪ್ರವಾಸ ಮಾಡಿ ಅಲ್ಲಿನ ಕನ್ನಡ ಸಂಘಗಳಲ್ಲಿ, ಧರ್ಮ ಸಂಸ್ಥೆಗಳಲ್ಲಿ ನಮ್ಮ ಕರ್ನಾಟಕದ ಹಿರಿಮೆಯನ್ನು ಉಪನ್ಯಾಸಗಳ ಮೂಲಕ ತೋರಿಸುತ್ತಾ ತಮ್ಮ ಕವಿತೆಗಳನ್ನು ವಾಚಿಸುತ್ತಾ ಹದಿನಾರು ಪ್ರಮುಖ ಪಟ್ಟಣಗಳಲ್ಲಿ ಆರ್ಟ್ ಆಪ್ ಲಿವಿಂಗ್ ಫೌಂಡೇಷನ್, ಸ್ಪಿರಿಚುವೆಲ್ ಯೂನಿವರ್‌ಸಿಟಿ ಸಹಯೋಗದೊಂದಿಗೆ ಧರ್ಮ, ಸಾಹಿತ್ಯ, ಕಲೆ, ಸಂಸ್ಕೃತಿ, ವಿಶ್ವಭಾತೃತ್ವ, ವಿಶ್ವ ಮಾನವ ತತ್ವ ಸಂದೇಶಗಳನ್ನು ಪ್ರಚುರಪಡಿಸಿ ನಾಡಿನ ಸಂಸ್ಕೃತಿಯ ಘನತೆಯನ್ನು ವಿದೇಶದಲ್ಲಿ ಎತ್ತಿ ಹಿಡಿದಿದ್ದಾರೆ, ಮತ್ತು ಪ್ರಸಾರ ಮಾಡಿದ್ದಾರೆ.

2 ಸೆಪ್ಟೆಂಬರ್ 2004 ರಿಂದ ಅಮೆರಿಕಾದಲ್ಲಿನ ಫ್ಲೊರಿಡಾದ ಓರ್ಲಾಂಡೋ ವಿಶ್ವ ಕನ್ನಡ ಸಮ್ಮೇಳನದಲ್ಲಿ (ಅಕ್ಕ ಕನ್ನಡ ಕೂಟ) ಹಾಗೂ 2008 ರ ಚಿಕಾಗೋದ ಅಕ್ಕ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ವಿಶೇಷ ತಂಡವನ್ನು ಆಯ್ಕೆ ಮಾಡಿ ಕಳುಹಿಸಿದ ಪ್ರತಿಭಾವಂತರಲ್ಲಿ ಸಾಹಿತ್ಯ ವಿಭಾಗದಿಂದ ಆಯ್ಕೆಯಾಗಿ ಪ್ರತಿನಿಧಿಸಿದ್ದಾರೆ.

ಇತ್ತೀಚೆಗೆ ದೊ.ರಂ.ಗೌ. ಅವರು ತಮ್ಮ ಬಾಳ ಸಂಗಾತಿಯೊಂದಿಗೆ ಈಜಿಪ್ಟ್ಗೆ ಕೂಡಾ ಪ್ರವಾಸ ಹೋಗಿ ಬಂದಿದ್ದಾರೆ.

ಗೌಡರ ರಚನೆಯ ಭಕ್ತಿಗೀತೆಗಳ ಧ್ವನಿಸುರುಳಿಗಳು

  1. ಆದಿಚುಂಚನಗಿರಿ ಭಕ್ತಿಗೀತೆಗಳು
  2. ಕಾವ್ಯಾಂಜಲಿ
  3. ಶ್ರೀಗುರು ಚರಣದಲ್ಲಿ
  4. ಶ್ರೀ ಅಯ್ಯಪ್ಪ ಸ್ವಾಮಿ ಭಕ್ತಿ ಕುಸುಮಾಂಜಲಿ
  5. ಭಕ್ತಿ ಶರಣಾಂಜಲಿ
  6. ಶ್ರೀ ಸಿದ್ಧೇಶ್ವರ ಸ್ತುತಿ
  7. ಸಪ್ತಮಾತಾ ಗೀತಾಂಜಲಿ
  8. ಶ್ರೀ ಅಷ್ಟದೇವಿ ಗೀತಾಮಾಲಾ
  9. ಶ್ರೀ ಹಿಮವತ್ ವೇಣುಗೋಪಾಲ ಸ್ವಾಮಿ ಭಕ್ತಿಗೀತೆಗಳು
  10. ಶಿವಯೋಗಿ ಭಕ್ತಿ ಕುಸುಮಾಂಜಲಿ
  11. ಚಿಂತನ ಚೈತನ್ಯ
  12. ಶ್ರೀ ಗುರು ಸಂಕೀರ್ತನ
  13. ಗಂಗಾತರಂಗ
  14. ಚಿನ್ಮಯಿ ತಾಯಿ ಚೌಡೇಶ್ವರಿ
  15. ಗೀತಾ ಗಂಗಾಧರ

– ಮುಂತಾದ ಭಕ್ತಿ ಸಾಹಿತ್ಯ ವಾಹಿನಿಯನ್ನೇ ಹರಿಸಿದ್ದಾರೆ ದೊಡ್ಡರಂಗೇಗೌಡರು.

ಭಾವಗೀತೆಗಳ ಧ್ವನಿಸುರುಳಿಗಳು

ಕನ್ನಡ ನಾಡಿನ ಸುಗಮ ಸಂಗೀತ ಕ್ಷೇತ್ರಕ್ಕೆ ಕವಿಯಾಗಿ, ಭಾವಗೀತೆಕಾರರಾಗಿ ಡಾ. ದೊಡ್ಡರಂಗೇಗೌಡರ ಕೊಡುಗೆ ಅಪಾರವಾದುದು. ಇವರ ಒಂದೊಂದು ಧ್ವನಿಸುರುಳಿಯೂ ಕನ್ನಡ ಜನತೆಯ ಹೃದಯದಲ್ಲಿ ನಾಡು ನುಡಿಯ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಹಾಗೂ ಸದಭಿರುಚಿ ಚಿಗುರಿಸುವಲ್ಲಿ ಅಗಾಧ ಪರಿಣಾಮ ಬೀರಿದೆ.

ಮಾವು-ಬೇವು
ಗೀತವೈಭವ
ಕಾವ್ಯ -ಕಾವೇರಿ
ತಂಗಾಳಿ
ಪ್ರೀತಿ -ಭಾವನೆ
ಪ್ರೇಮ -ಪಯಣ
ಹೃದಯದಹಕ್ಕಿ
ಹೋಳಿಹುಣ್ಣಿಮೆ
ಯುಗಾದಿಚೈತ್ರೋತ್ಸವ
ಮಾವು -ಮಲ್ಲಿಗೆ
ಭೂಮಿ -ಬಾನು
ಸಿರಿ -ಸಂವರ್ಧನ
ನಲ್ಮೆ ನೇಸರ (ಸಾಹಿತ್ಯ ಮತ್ತು ಸಂಗೀತ)
ರಾಗರಂಗು
ಅಂತರಂಗದಹೂಬನ
– ಮುಂತಾದ ಧ್ವನಿಸುರುಳಿಗಳು ಭಾವಲೋಕವನ್ನು ಬೆಳಗಿಸಿವೆ. ಮತ್ತು ರಸಿಕರ ಮನಸ್ಸನ್ನೂ ಸೂರೆಗೊಂಡಿವೆ.

ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯ ಸೇವೆ

1977 ರಿಂದಲೂ ದೊಡ್ಡರಂಗೇಗೌಡರು ಐದು ನೂರಕ್ಕೂ ಹೆಚ್ಚು ಕನ್ನಡ ಚಿತ್ರಗೀತೆಗಳನ್ನು ರಚಿಸಿ ಜನಮಾನಸ ಗೆದ್ದು ಕನ್ನಡ ಚಿತ್ರ ರಸಿಕರ ಪ್ರೀತಿಯ ಕವಿಯಾಗಿದ್ದಾರೆ. ಹತ್ತು ಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. 70 ಕ್ಕೂ ಮಿಕ್ಕು ಧ್ವನಿ ಸುರುಳಿಗಳು ಪ್ರಕಟವಾಗಿ ಜನಪ್ರಿಯತೆಯ ಔನ್ನತ್ಯ ಪಡೆದಿವೆ. ನೂರಕ್ಕೂ ಹೆಚ್ಚು ದೂರದರ್ಶನ ಧಾರಾವಾಹಿಗಳಿಗೆ ಶೀರ್ಷಿಕೆ ಸಾಹಿತ್ಯ ಗೀತೆಗಳನ್ನು ರಚಿಸಿದ್ದಾರೆ.

ಡಾ. ದೊಡ್ಡರಂಗೇಗೌಡರ ಗೀತೆಗಳಿಗಿರುವ ಕೆಲವು ಕನ್ನಡ ಚಿತ್ರಗಳು :

ಪಡುವಾರ ಹಳ್ಳಿ ಪಾಂಡವರು
ಪರಸಂಗದ ಗೆಂಡೇತಿಮ್ಮ
ಬಂಗಾರದ ಜಿಂಕೆ
ಅಶ್ವಮೇಧ
ರಂಜಿತಾ
ರಶ್ಮಿ
ಪ್ರೇಮಪರ್ವ
ಕೃಷ್ಣ ರುಕ್ಮಿಣಿ
ಹೊಸನೀರು
ಒಲವೇ ಬದುಕು
ಆಲೆಮನೆ
ಗಣೇಶನ ಮದುವೆ
ಕಾವ್ಯ
ಜನುಮದ ಜೋಡಿ

ಹೀಗೆ ಇನ್ನೂ ಮುಂತಾದ ಚಿತ್ರಗಳಿಗೆ ಎಂದೂ ಮರೆಯಲಾಗದ ಗೀತೆಗಳನ್ನು ಬರೆದಿದ್ದಾರೆ.

ಇವರ ಗೀತೆಗಳಲ್ಲಿ ಸಾಹಿತ್ಯದ ಜೊತೆ ಭಾವಾತ್ಮಕ, ಸಂಗೀತ ಮತ್ತು ಕಲಾತ್ಮಕತೆ ಮನೆ ಮಾಡಿರುತ್ತದೆ. ಇವರ ಸಾಹಿತ್ಯಕ್ಕೆ ಕನ್ನಡ ಪತ್ರಿಕಾ ಲೋಕ ಮುಕ್ತ ಪ್ರಶಂಸೆ ಮಾಡಿದೆ. ಇದುವರೆಗೂ ಗೌಡರ 50 ಕ್ಕೂ ಹೆಚ್ಚು ಭಾವಗೀತೆಗಳ ಧ್ವನಿಸುರುಳಿಗಳು ಹೊರ ಬಂದಿವೆ. 30 ಕ್ಕೂ ಅಧಿಕ ಭಕ್ತಿಗೀತೆಗಳ ಧ್ವನಿಸುರುಳಿಗಳೂ ಬಂದಿವೆ. ಮಾವು-ಬೇವು ಧ್ವನಿಸುರುಳಿ ಮನೆ ಮಾತಾಗಿದೆ. ಇದು ವಿದೇಶಗಳ ಕನ್ನಡಿಗರಿಗೂ ಇಷ್ಟವಾಗಿದ್ದು ಅಲ್ಲೂ ಕನ್ನಡಿಗರ ಮನೆ ಮಾತಾಗಿದೆ.