Categoryಜೀವನ ಚರಿತ್ರೆ

ಕರ್ನಾಟಕ ಮಹಾಜನತೆಯಿಂದ ದೊರೆತ ಪುರಸ್ಕಾರಗಳು

1. ರಾಜ್ಯದ ವಿವಿಧ ಜಿಲ್ಲೆಗಳ ಜನತೆ ಇವರು ನಾಡು ನುಡಿಗಾಗಿ ಸಲ್ಲಿಸಿದ ಸೇವೆಗಾಗಿ 1972 ರಿಂದಲೂ ಪುರಸ್ಕರಿಸುತ್ತಾ ಬಂದಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಕವಿಗೆ ಸೂಕ್ತ ಬಿರುದುಗಳನ್ನಿತ್ತು ಗೌರವಿಸಿವೆ.

2. 1972 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಯಿಂದ ಗೌಡರ ಕವನ ಸಂಕಲನ ಕಣ್ಣು ನಾಲಗೆ ಕಡಲು ಕಾವ್ಯ ಕೃತಿಗೆ ಬಹುಮಾನ ಬಂದಿದೆ.

3. 1982 ರಲ್ಲಿ ಅಖಿಲ ಕರ್ನಾಟಕ ಚಲನಚಿತ್ರ ರಸಿಕರ ಸಂಘ ದಿಂದ ಅರುಣರಾಗ ಚಿತ್ರಕ್ಕಾಗಿ ಗೌಡರು ಬರೆದ ವರ್ಷದ ಶ್ರೇಷ್ಠ ಸಾಹಿತ್ಯಕ ಗೀತೆ “ನಾನೊಂದು ತೀರ… ನೀನೊಂದು ತೀರ…” ಕ್ಕೆ ಅತ್ಯುತ್ತಮ ಸಾಹಿತ್ಯವೆಂದು ಪರಿಗಣಿತವಾಗಿ ಪುರಸ್ಕಾರ ದೊರೆತಿದೆ.

4. 1990 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ನಿಂದ ಇವರ ಕಾವ್ಯಕೃತಿ (ಪ್ರಗಾಥ ವಿಭಾದ) ಪ್ರೀತಿ ಪ್ರಗಾಥಕ್ಕೆ ವರ್ಷದ ಅಭಿಜಾತ ಕಾವ್ಯ ಎಂದು ವಿಮರ್ಶಕರ ಮೆಚ್ಚುಗೆ ಪಡೆದು – “ರತ್ನಾಕರವರ್ಣಿ – ಮುದ್ದಣ ಕಾವ್ಯ ಪ್ರಶಸ್ತಿ” ಬಹುಮಾನ ಬಂದಿದೆ.

5. 1999 ರಲ್ಲಿ ಆರ್ಯಭಟ ಸಂಸ್ಥೆಯಿಂದ ಗೌಡರ ಭಕ್ತಿಗೀತೆ ಧ್ವನಿಸುರುಳಿ ಜಯ ಎನ್ನಿ ಭೈರವಗೆ ಕ್ಯಾಸೆಟ್ಗಾಗಿ ಆರ್ಯಭಟ ಪ್ರಶಸ್ತಿ ಬಂದಿರುತ್ತದೆ.

6. ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಹಾಕವಿ ಕುವೆಂಪು ಅವರ ಘನ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಗೌಡರು ಕವಿತಾ ವಾಚನ ಮತ್ತು ಗಾಯನ ಮಾಡಿದ್ದರು.

7. ಹಾಗೂ ಕುವೆಂಪು ಗೆಳೆಯರ ಬಳಗದಿಂದ ವಿಶ್ವ ಮಾನವ ಪ್ರಶಸ್ತಿಯನ್ನು ಮತ್ತು ಸುರ್ವೆ ಕಲ್ಚರ್ ಅಕಾಡೆಮಿ ಯವರಿಂದ ಸಾಹಿತ್ಯ ಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ.

8. ಗಾರ್ಡನ್ ಸಿಟಿ ಕಲ್ಚರಲ್ ಅಕಾಡೆಮಿ ಅವರಿಂದ ಸುವರ್ಣ ಕರ್ನಾಟಕ ರತ್ನ 2005 ಪ್ರಶಸ್ತಿಯನ್ನೂ ಪಡೆದಿರುತ್ತಾರೆ.

ಗೌಡರಿಗೆ ದೊರೆತ ಅಂತರಾಷ್ಟ್ರೀಯ ಪುರಸ್ಕಾರಗಳು

[ ಶ್ರೀಯುತ ದೊಡ್ಡರಂಗೇಗೌಡರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ದೇಶ-ವಿದೇಶಗಳಿಂದ ಅನೇಕ ಮನ್ನಣೆಗಳು ದೊರೆತಿವೆ. ಅವುಗಳಲ್ಲಿ ಪ್ರಮುಖವಾದವು ಇಂತಿವೆ. ]

1. ಅಮೆರಿಕನ್ ಬಯೋಗ್ರಾಫಿಕಲ್ ಸೆಂಟರ್ (ಯು.ಎಸ್.ಎ.) ಅವರಿಂದ ಹೊರ ಬಂದಿರುವ ಉದ್ಗ್ರಂಥ 1992/93 – ಮೋಸ್ಟ್ ಅಡ್ಮಿರೆಡ್ ಮೆನ್ & ವುಮೆನ್ ಆಫ್ ದಿ ಇಯರ್ – ಅನ್ಯುವಲ್ ಪೋಲ್ ನಲ್ಲಿ 500 ಜನ ವಿಶ್ವ ಪ್ರತಿಭಾವಂತರ ಪಟ್ಟಿಯಲ್ಲಿ ಕನ್ನಡದ ಜನಪ್ರಿಯ ಕವಿ ದೊಡ್ಡರಂಗೇಗೌಡ ಎಂದು ವಿಶಿಷ್ಟ ಉಲ್ಲೇಖವಾಗಿದೆ.

2. ಎ.ಬಿ.ಐ. ನಾರ್ಥ್ ಕರೋಲಿನಾ (ಯು.ಎಸ್.ಎ) ಯಿಂದ ದಾಖಲೆ ಪತ್ರ ಹಾಗೂ ಕವಿಯ ಸಂಪೂರ್ಣ ಜೀವನ ವಿವರಗಳು ಹಾಗೂ ಸಾಧನೆಗಳು ವೈಶಿಷ್ಟ್ಯಗಳನ್ನು ಗುರುತಿಸಿ ದಾಖಲೆ ವಿಶ್ವಮಾನ್ಯತೆ ನೀಡಿದೆ.

3. ಇಂಗ್ಲೆಂಡಿನ ಕೇಂಬ್ರಿಡ್ಜ್ ದ ಮೆನ್ ಇನ್ ಅಚೀವ್‌ಮೆಂಟ್ ಪ್ರಶಸ್ತಿ ಸಂಪುಟ 16 ರಲ್ಲಿ ಕನ್ನಡ ಕವಿ ದೊಡ್ಡರಂಗೇಗೌಡರ ಗಮನಾರ್ಹ ಸಾಧನೆಗಳು, ವೈಶಿಷ್ಟ್ಯಗಳನ್ನು ಗುರುತಿಸಿದ ದಾಖಲೆಯ ಮೂಲಕ ಕವಿಗೆ ವಿಶ್ವ ಮಾನ್ಯತೆ ನೀಡಲಾಗಿದೆ.

4. 1ನೇ ಆಗಸ್ಟ್ 1997 ರಿಂದ ಅಮೇರಿಕನ್ ಬಯಾಗ್ರಫಿಕಲ್ ಇನ್ಸ್ಟಿಟ್ಯೂಟ್ (ಎಬಿಐ-ಯು.ಎಸ್.ಎ.) ಸಂಸ್ಥೆಯವರು ಭಾರತೀಯ ಕವಿ ಡಾ. ದೊಡ್ಡರಂಗೇಗೌಡರನ್ನು ಭಾರತೀಯ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ. ಇದು ಕನ್ನಡದ ಸೃಜನಶೀಲ ಲೇಖಕನಿಗೆ ಅಂತರಾಷ್ಟ್ರೀಯ ಎಬಿಐ ಸಂಸ್ಥೆ ನೀಡಿದ ಗೌರವದ ಮನ್ನಣೆಯಾಗಿದೆ.

5. ಡಾ. ದೊಡ್ಡರಂಗೇಗೌಡರು 11 ನವೆಂಬರ್ 1997 ರಲ್ಲಿ ಪ್ಲಿಂಟ್ (ಯು.ಎಸ್.ಎ) ಮಿಷಿಗನ್ ರಾಜ್ಯದಿಂದ ರಿಕಗ್ನೇಷನ್ ಅವಾರ್ಡ್ ಪಡೆದಿದ್ದಾರೆ.

6. ಓರ್ಲಾಂಡೋದಲ್ಲಿ 2004 ರಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ಪಾಲ್ಗೊಂಡು ಕನ್ನಡ ನವೋದಯ ಕಾವ್ಯ, ಡಾ. ಶಿವರಾಮ ಕಾರಂತರ ಕಾದಂಬರಿಗಳು ಹಾಗೂ ವಿಶ್ವ ಮಾನವ ಕುವೆಂಪು ಕಾವ್ಯ ಕುರಿತು ಉಪನ್ಯಾಸ ನೀಡಿದ್ದಾರೆ.

ರಾಷ್ಟ್ರೀಯ ಪುರಸ್ಕಾರಗಳು – ದಾಖಲೆಗಳು

1. ಹೂ ಈಸ್ ಹೂ? ನಲ್ಲಿ ಇವರ ಬಗ್ಗೆ ದಾಖಲೆಗಳು ಅಚ್ಚಾಗಿವೆ.

2. ಏಷಿಯಾ – ಪೆಸಿಫಿಕ್ನಲ್ಲಿ ಇವರ ಸಾಧನೆಗಳ ಉಲ್ಲೇಖವಾಗಿದೆ.

3. ಹಿರಿಯ ಆಂಗ್ಲ ಪ್ರಾಧ್ಯಾಪಕ ಪ್ರೊ. ಎನ್. ನಂಜುಂಡ ಶಾಸ್ತ್ರಿ ಅವರು ದಿ ಅಪ್‌ಕಮಿಂಗ್ ಮಾರ್ಡರ್ನ್ ಕನ್ನಡ ಪೊಯೆಟ್ ; ದೊಡ್ಡರಂಗೇಗೌಡ ಎಂಬ ಸುದೀರ್ಘ ಲೇಖನ ಬರೆದು ಪ್ರಕಟಿಸಿದ್ದಾರೆ.

4. ಇವರ 47 ಕನ್ನಡ ಕವಿತೆಗಳು ಹಿಂದಿ ಭಾಷೆಗೆ ಅನುವಾದಿತಗೊಂಡಿವೆ. ಗೀತ್ ವೈಭವ್ ಎನ್ನುವ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಮುದ್ರಣಗೊಂಡಿವೆ.

5. 1977 ರಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ನಡೆದ ಸರ್ವಭಾಷಾ ಕವಿಗೋಷ್ಠಿಯಲ್ಲಿ ಶ್ರೀಯುತರು ಕನ್ನಡ ನಾಡನ್ನು ಪ್ರತಿನಿಧಿಸಿ ಕವಿತೆ ವಾಚಿಸಿದ್ದಾರೆ.

ಕರ್ನಾಟಕ ಸರ್ಕಾದಿಂದ ದೊರೆತ ಪ್ರಶಸ್ತಿಗಳು ಪುರಸ್ಕಾರಗಳು

1. 1982 ರಲ್ಲಿ ಗೌಡರು ಆಲೆಮನೆ ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು. ವಿಶೇಷ ಗೀತೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಕೂಡಾ ಇವರೇನೇ.

2. 1992 ರಲ್ಲಿ ಇವರು ಗಣೇಶನ ಮದುವೆ ಚಿತ್ರಕ್ಕಾಗಿ ಬರೆದ ಕಾವ್ಯಾತ್ಮಕ ಗೀತೆಗೆ ವರ್ಷದ ಶ್ರೇಷ್ಠ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ.

3. 1995 ರಲ್ಲಿ ಇವರ ಕಾವ್ಯ ಚಿತ್ರದ ಅತ್ಯುತ್ತಮ ಗೀತೆಗೆ ವರ್ಷದ ಶ್ರೇಷ್ಠ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ.

4. 1997 ರಲ್ಲಿ ಇವರು ಜನುಮದ ಜೋಡಿ ಚಿತ್ರಕ್ಕೆ ಬರೆದ ಜಾನಪದೀಯ ಗೀತೆಗೆ ವರ್ಷದ ಶ್ರೇಷ್ಠ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು.

5. 1999 ರ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸನ್ಮಾನ.

6. 18 ಏಪ್ರಿಲ್ 2000 ರಂದು ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೆಂಪೇಗೌಡ ಪ್ರಶಸ್ತಿ ದೊರೆತಿದೆ.

7. 2002 ರಲ್ಲಿ ಶ್ರವಣಬೆಳಗೊಳದ ಶ್ರೀ ಮಠದಿಂದ ವರ್ಧಮಾನ ಮಹಾವೀರ ಪ್ರಶಸ್ತಿಯನ್ನು ಪಡೆದಿದ್ದಾರೆ.

8. ನಾಡಿನ ಗೌರವಾನ್ವಿತ ಸಂಸ್ಥೆಯಾದ ಕನಾಟಕದ ರಾಜ್ಯ ಸಾಹಿತ್ಯ ಅಕಾಡೆಮಿ ರಾಜ್ಯ ಸರ್ಕಾರದಿಂದ ನೇಮಕವಾಗಿ ಎರಡು ಅವಧಿಗಳ ಕಾಲ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಸ್ಥಾಯಿ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಅಕಾಡೆಮಿ ಹೊರ ತರುತ್ತಿದ್ದ ಅನಿಕೇತನ ಸಾಹಿತ್ಯ ತ್ರೈಮಾಸಿಕದ ಗೌರವ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

9. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗೌರವಾನ್ವಿತ ಸದಸ್ಯರಾಗಿ ( ಸರ್ಕಾರದಿಂದ ನೇಮಕ ) ಅನನ್ಯ ಅನುಭವ ಪಡೆದಿದ್ದಾರೆ.ಬೃಹತ್ ಬೆಂಗಳೂರು ನಗರದಲ್ಲಿ ಕನ್ನಡ ಫಲಕಗಳು ಮಿನುಗಿ ಮಿಂಚಲು ಸಾಕಷ್ಟು ಶ್ರಮಿಸಿದ್ದಾರೆ.

ಡಾ. ದೊಡ್ಡರಂಗೇಗೌಡ ಅವರ ಜೀವನ ವಿವರಗಳು

ಶಿಕ್ಷಣ, ಸಾಹಿತ್ಯ, ಚಲನಚಿತ್ರ, ಸುಗಮ ಸಂಗೀತ… ಹೀಗೆ ಹಲವು ಕ್ಷೇತ್ರಗಳಲ್ಲಿ ಏಕ ಕಾಲದಲ್ಲಿ ತಮ್ಮ ಪ್ರತಿಭೆಯನ್ನು ತೊಡಗಿಸಿಕೊಂಡ ಸೃಜನಶೀಲರು – ಕವಿ ದೊಡ್ಡರಂಗೇಗೌಡ ಅವರು.

ನಿರಂತರವಾಗಿ ಮೌಲಿಕ ಪುಸ್ತಕಗಳ ಪ್ರಕಟಣೆ, ನಾಡು ನುಡಿಯ ಹಿರಿಮೆಯ ಬಗೆಗೆ ಪ್ರಬುದ್ಧ ಉಪನ್ಯಾಸಗಳ ನೀಡಿಕೆ, ಸಾಹಿತ್ಯಕ, ಸಾಸ್ಕೃತಿಕ ಪರಿಚಾರಿಕೆ, ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳುವಿಕೆ, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆ – ಇವು ಡಾ.ದೊಡ್ಡರಂಗೇಗೌಡರ ಬದುಕಿನ ಜೀವಂತಿಕೆ.

ದೊಡ್ಡರಂಗೇಗೌಡರು ಕುರುಬರ ಹಳ್ಳಿ, ಬಡವನ ಹಳ್ಳಿ, ಮಧುಗಿರಿ, ತುಮಕೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ1970 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಆನರ್ಸ್ ಪದವಿ, 1972 ರಲ್ಲಿ ಎಂ.ಎ. ಪದವಿ ಪಡೆದರು. ಜಾನಪದ ವಿಶೇಷ ಅಧ್ಯಯನ ; 2004 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ನವೋದಯ ಕಾವ್ಯ : ಒಂದು ಪುನರ್ ಮೌಲ್ಯಮಾಪನ ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದರು.

1972ರ ಜೂನ್ 18 ರಂದು ಬೆಂಗಳೂರು ನಗರದ ಎಸ್.ಎಲ್.ಎನ್. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದ ದೊಡ್ಡರಂಗೇಗೌಡರು, 1980 ರಲ್ಲಿ ಕನ್ನಡ ಪ್ರವಾಚಕರಾದರು.

1985ರಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, 1990 ರಿಂದ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ 2002 ರಲ್ಲಿ ನಿವೃತ್ತರಾಗಿದ್ದಾರೆ. ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಗೌರವ ನಿದರ್ೇಶಕರಾಗಿ ಸೇವೆ ಸಲ್ಲಿಸಿರುವ ಗೌಡರು ವಿಧಾನ ಪರಿಷತ್ನ ಸದಸ್ಯರೂ ಹೌದು.

ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದ ಡಾ. ದೊಡ್ಡರಂಗೇಗೌಡರು ಇದುವರೆಗೂ ಸುಮಾರು 80 ವಿವಿಧ ರೀತಿಯ ಕೃತಿಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಗೊಳಸಿದ್ದಾರೆ. ಹಾಗೆಯೇ 500ಕ್ಕೂ ಹೆಚ್ಚು ಕನ್ನಡ ಚಿತ್ರಗೀತೆಗಳನ್ನೂ ಬರೆದು ಕನ್ನಡಿಗರ ಮನೆ ಮಾತಾಗಿದ್ದಾರೆ.