IMG_20140623_0010

ಭೃಂಗದ ಬೆನ್ನೇರಿ ಬಂತು…
ಯಾಕೆ ನನ್ನ ಅಂತರಾಳದಲ್ಲಿ ನಾದದ ಗುಂಗು ಬಂದು ಸೇರಿಕೊಂಡಿತೋ ನಾನರಿಯೆ! ಅದು ಎಂದು ಹೀಗೆ ಸುಭದ್ರವಾಗಿ ಬೇರೂರಿತೋ ಅದನ್ನೋ ನಾನು ತಿಳಿಯೆ! ಆದರೆ ಇದು ಸತ್ಯ. ಬರೆಯ ಹೊರಟರೆ ಮಾತು ಗೇತದೆಡೆಗೆ ಅಭಿಮುಖವಾಗುತ್ತದೆ. ಅದರಿಂದ ಸಲೀಸಾಗಿ ಬರೆದು ಬಿಡುತ್ತೇನೆ. ಎಲ್ಲವೂ ಹಾಡುವ ರೀತಿಯೇ ಅಭಿವ್ಯಕ್ತವಾಗುತ್ತದೆ. ಇಂಥ ಒಂದು ಅಪೂರ್ವ ಗುಂಗಿನಿಂದ ಹೊರ ಬರಲು ಪ್ರಯತ್ನಿಸಿದಾಗೆಲ್ಲಾ ನನ್ನೊಳಗೆ ನವ್ಯಕಾವ್ಯ ಶೈಲಿ ಅಂಕುರವಾಗಿದೆ. ಇನ್ನುಳಿದ ವೇಳೆ ಅದು ನಾದಮಯವೇ! ಗೀತಗಾರಿಕೆಯೇ! ರಮ್ಯವೇ!
ಇಂಥ ಬರಹದಲ್ಲೂ ಒಂದು ಬಗೆ ಖುಷಿ ಇದೆ; ಹೇಳಬೇಕಾದ್ದನ್ನು ಸಂಗೀತಕ್ಕೆ ಅಳವಡಿಸುವ ಹಾಗೇನೇ ಹೇಳುತ್ತಾ ಹೋಗುವುದೂ ಒಂದು ಬಗೆ ಅಭಿವ್ಯಕ್ತಿ ಮಾಧ್ಯಮವೇ!
ಸುಗಮ ಸಂಗೀತದ ರೂಪಣಕ್ಕೆ ಇಂಥ ಭಾವಾಭಿವ್ಯಕ್ತಿಯೇ ತಳಪಾಯ. ಗೀತೆಗಳಲ್ಲೂ ಚಿಂತನ-ಮಂಥನ ಇರಬಹುದು, ಇರಬಾರದೆಂದೇನೂ ಇಲ್ಲ. ಕೆಲವೊಮ್ಮೆ ತೆಳುವಾಗಿರಬಹುದಷ್ಟೇ…

ಇಷ್ಟಂತೂ ಸತ್ಯ. ನಾನು ಇಂಥ ಗೀತೆಗಳನ್ನು ಬರೆಯುವುದರ‍್ಲಿ ಒಂದು ಬಗೆ ಆನಂದವನ್ನು ಅನುಭವಿಸಿದ್ದೇನೆ. ಶೈಲಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದೇನೆ. ಇದನ್ನು ಸಹೃದಯರು ಪರಾಂಬರಿಸುತ್ತಾರೆಂದು ಭಾವಿಸಿದ್ದೇನೆ.
– ದೊಡ್ಡರಂಗೇಗೌಡ