yuga_vaniನಾನು ಯಾವ ಗಳಿಗೆ ಭಾವನಾತ್ಮಕವಾಗಿ ಹಾಡಿಕೊಳ್ಳಲು ಪ್ರಾರಂಭಿಸಿದೆನೋ, ಖಂಡಿತಾ ಅರಿಯಲಾರೆ ! ಅಂದಿನಿಂದ ಇಂದಿನ ತನಕ ಹಾಡಿಕೊಳ್ಳುತ್ತಲೇ ಬಂದಿದ್ದೇನೆ.

ಹಾಡು ನನ್ನ ಜೀವನದ ಅನಿವಾರ್ಯ ಭಾವಗಂಗೆ. ಹರಿಯುತ್ತಲೇ ಇದೆ, ನಿರಂತರ. ಯಾರೂ, ಕಲಿತ ಮತುಗಳನ್ನೆಲ್ಲ ಬರೆಯುವುದಿಲ್ಲ. ಬರೆದರೂ ಅವು ಹಾಡುಗಳು ಆಗುವುದಿಲ್ಲ!

ಹಾಡಲ್ಲಿ ಪಾಡಿದೆ, ಕವಿ ಜೀವನದ ಏರಿಳಿತದ ಜಾಡಿದೆ. ನೋಡಿದ್ದೂ, ಕೂಡಿದ್ದೂ ಬಾಡಿದ್ದೂ, ಬೇಡಿದ್ದೂ, ತೀಡಿದ್ದೂ, ತಿದ್ದಿದ್ದೂ, ಎದ್ದದ್ದೂ, ಬಿದ್ದದ್ದೂ, ಗುದ್ದಿದ್ದೂ… ಎಲ್ಲಾ… ಎಲ್ಲವೂ ಅಲ್ಲಿ ಕವಿಗೆ ಅರಿವಿಲ್ಲದೆ ಮನದ ಒಳಗಿನೊಳಗಿನ ಪಾತಳಿಯಲ್ಲಿ ಅನುಭವವಾಗಿ ಬೆರೆತಿರುತ್ತವೆ.

ನಾನು ಮೂಡುವ – ಮುಳುಗುವ ರವಿಯಲ್ಲಿ, ಬೆಳಗುವ ಚಂದ್ರನಲ್ಲಿ, ಹೊಳೆಯುವ ಚುಕ್ಕಿಗಳಲ್ಲಿ, ಬೀಸುವ ಗಾಳಿಯಲ್ಲಿ, ಹರಿಯುವ ನದಿಯಲ್ಲಿ, ಸುಮ್ಮನೆ ಧ್ಯಾನಸ್ಥವಾಗಿ ಕುಳಿತ ಬೆಟ್ಟಗುಡ್ಡಗಳ ಪ್ರಶಾಂತ ಭಂಗಿಗಳಲ್ಲಿ… ಅತ್ಯತ್ತಮವಾದ ಭಾವನಾತ್ಮಕವಾದ ಹಾಡುಗಳ ಕಂಡುಕೊಂಡೆ.

ಈಗಲೂ ನನ್ನ ಹುಡುಕಾಟ ನಡೆದೇ ಇದೆ ! ಏನೆಂದರೆ, ಈಗ … ಮನೆಯಂಗಳದಲ್ಲಿ, ಮನೆಯೊಳಗೆ, ಬೀದಿಗಳಲ್ಲಿ …. ಪಾಡಿರುವುದು ನನಗೆ ಅರಿವಾದಾಗ ಹಾಡುಗಳ ಮರೆಯದೆ ಬರೆದಿಡುತ್ತೇನೆ.

ಮನಸ್ಸಿನಲ್ಲಿ ಮೂಡಿದ, ಮೂಡಿ ಮರೆತು ಹೋದ ಸಾಲುಗಳು ಅನೇಕ. ಎಷ್ಟೋ ವೇಳೆ ಅಪೂರ್ವ ಪಲ್ಲವಿಗಳು ಮನದಲ್ಲಿ ಪಲ್ಲವಿಸಿದಾಗ, ಬರೆದಿಡುವ ವ್ಯವಧಾನವಿಲ್ಲದೆ ಹೋದುದರಿಂದ, ಅವುಗಳು ಸಂಪೂರ್ಣ ಮರೆತು ಹೋಗಿವೆ.

ಮರೆತು ಹೋಗದೆ ಉಳಿದ …. ಪೆನ್ನು ಹಾಳೆಗಳಿಂದ ಆಕಾರ ಪಡೆದ … ಕೆಲವು ಪದ್ಯಗಳು ಮಾತ್ರ ಇಲ್ಲಿವೆ.

ಪ್ರಿಯ ಓದುಗರೇ, ಇವು ನಿಮಗಾಗಿ. ಹೃನ್ಮನ ಮುದಕ್ಕಾಗಿ…. ಒಬ್ಬ ಕವಿ ತನ್ನ ನಾಡಿನ ಜನರಿಗೆ ಇದಕ್ಕಿಂತ ಇನ್ನೇನು ತಾನೆ ಕೊಡಲು ಸಾಧ್ಯ ?

ಸಹೃದಯರೇ, ಸ್ಪಂದಿಸಿ… ಪ್ರತಿಕ್ರಿಯಿಸಿ…