aseema_rupiಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವ ನಿಸರ್ಗ – ಸೀಮ ರೂಪಿ ; ವ್ಯೋಮ – ಅಸೀಮ ರೂಪಿ; ಭೂಮಿಯೂ ಅಷ್ಟೇ; ಭಾನೂ ಅಷ್ಟೇ. ಅಂಥ ಅನೂಹ್ಯ ಪ್ರಕೃತಿಯನ್ನು ಅರಿಯುವ ಪ್ರಯತ್ನ ನಿರಂತರವಾಗಿ ಮಾನವನಿಂದ ನಡೆಯುತ್ತಿದ್ದರೂ ಕವಿಯು ವಿಜ್ಞಾನಿಯಂತೆ ವಿಶ್ಲೇಷಣೆಗೆ ತೊಡಗದೆ ಅವನ ಭಾವುಕ ಸ್ಪಂದನಗಳನ್ನೇ ಕವಿತೆಗಳಲ್ಲಿ ದಾಖಲಿಸುತ್ತಾ ಹೋಗುತ್ತಾನೆ. ಇದು ಸಹಜವಾದ ಸೃಜನಶೀಲ ಪ್ರಕ್ರಿಯೆ. ನಾನೂ ಇದಕ್ಕೆ ಹೊರತಾಗಿಲ್ಲ.
ಯಾವಾಗ ನನ್ನ ಹೃನ್ಮನ ಸ್ಪಂದಿಸುತ್ತದೆ, ಆಗ ನನ್ನ ಭಾವನಾತ್ಮಕ ಸ್ಪಂದನ. ಯಾವಾಗ ನಾನು ವಿಚಾರದ ಮೊರೆ ಹೋಗುತ್ತೇನೆ, ಆಗ ವೈಚಾರಿಕ ಕವನ. ಎರಡೂ ರೀತಿಯಲ್ಲಿ ನನ್ನ ಸಾಹಿತ್ಯ ಸೃಷ್ಟಿ ಸಾಗಿಯೇ ಇದೆ.
ಇಲ್ಲಿ ಅಂಥ ಅನೇಕ ಕವಿತೆಗಳು ನನ್ನಿಂದ ರಚಿತವಾಗಿ ಸಂಕಲಿತಗೊಂಡಿವೆ. ಅನೇಕ ಗೀತೆಗಳು ಹಾಡಿಕೊಳ್ಳಲು ಬರುತ್ತವೆ. ಅಂಥವುಗಳನ್ನು ಹಾಡಿಕೊಂಡರೇ ಚೆಂದ. ಮತ್ತೆ ಕೆಲವು ಓದಲು ಸೂಕ್ತವಾಗಿವೆ. ಅಲ್ಲಿ ವಿಚಾರ ರತಿ ಇದೆ; ವೈಚಾರಿಕ ಗತಿಯೂ ಇದೆ. ಈ ಎಲ್ಲವೂ ಓದುಗರಿಗೆ ಪ್ರಿಯವಾದರೆ, ನಾನು ಬರೆದುದಕ್ಕೂ ಸಾರ್ಥಕ; ಪ್ರಕಾಶಕರು ಮುದ್ರಿಸಿದ್ದಕ್ಕೂ ಸಾರ್ಥಕ.