minchina_gonchaluಡಾ|| ದೊಡ್ಡರಗೇಗೌಡರ ಮಿಂಚಿನ ಗೊಂಚಲು ಕವನ ಸಂಕಲನದಲ್ಲಿ ವಿಶಿಷ್ಠ ಬಗೆಯ ಕವನಗಳಿವೆ. ಶ್ರೀಯುತರು ಕವಿಯಾಗಿ, ವಿಮರ್ಶಕರಾಗಿ, ಪ್ರಬಂಧಕಾರರಾಗಿ ಅತ್ಯುತ್ತಮ ಪ್ರಾಧ್ಯಾಪಕರಾಗಿ, ಜಾನಪದ ತಜ್ಞರಾಗಿ, ಗಾಯಕರಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸೃಜನಶೀಲ ಮಾಧ್ಯಮದ ಜೊತೆಗೆ ಚಲನಚಿತ್ರ ಹಾಗೂ ಟಿವಿ ಧಾರಾವಾಹಿಗಳಿಗೆ ಸಾಹಿತ್ಯ, ಸಂಭಾಷಣೆ, ಹಾಡುಗಳನ್ನು ಬರೆಯುವುದರ ಮೂಲಕ ಇತರೆ ಕ್ಷೇತ್ರಗಳಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

ಇವೆಲ್ಲಕ್ಕಿಂತ ಹೆಚ್ಚಾಗಿ ದೊಡ್ಡರಂಗೇಗೌಡರ ದೊಡ್ಡ ಗುಣ ಸಹೃದಯತೆ. ಬಹುಮುಖ ಪ್ರತಿಭೆಯ ಆಶಾಜೀವಿ. ಮುಗ್ಧ ಮನಸ್ಸಿನವರು. ಯಾರನ್ನೂ ದ್ವೇಶಿಸದವರು. ಮೃದು ಮನಸ್ಸಿನವರು. ಸರಳ ಜೀವಿಗಳು. ಎಲ್ಲರನ್ನೂ ಪರೀತಿಸುತ್ತಾರೆ. ಗೌಡರನ್ನೂ ನಾನು ಕಾಲೇಜಿನಲ್ಲಿ ಓದುತ್ತಿದ್ದಾಗಿನಿಂದಲೂ ಬಲ್ಲೆ. ಆಗ ಹೇಗಿದ್ದರೋ ಈಗಲೂ ಹಾಗೇ, ಅಷ್ಟೇ ಪ್ರೀತಿ ವಿಶ್ವಾಸ, ಗೌರವ.

ಡಾ|| ದೊಡ್ಡ ರಂಗೇಗೌಡರು ನಮ್ಮ ಪ್ರಕಾಶನದ ಮೇಲೆ ಅಪಾರ ಪ್ರೀತಿ ಇಟ್ಟ ನನ್ನ ಬದುಕಿನ ಆದರ್ಶ ಗುರು ಹಾಗೂ ಲೇಖಕರು. ಅವರ ಎರಡು ಪುಸ್ತಕಗಳು ಈಗಾಗಲೇ ನಮ್ಮ ಪ್ರಕಾಶನದಿಂದ ಪ್ರಕಟವಾಗಿ ಓದುಗರನ್ನು ತಲುಪಿವೆ. ಇದೀಗ ಮೂರನೇ ಪುಸ್ತಕ. ಭಾವಗೀತೆಗಳ ಕವನ ಸಂಕಲನ ಮಿಂಚಿನ ಗೊಂಚಲು ನಿಮ್ಮ ಕೈಯಲ್ಲಿದೆ.

ಇಲ್ಲಿನ ಬಹುಪಾಲು ಕವನಗಳಲ್ಲಿಯ ಸೌಮ್ಯ ಚೆಲುವು, ಪ್ರೀತಿ, ಸಮಷ್ಠಿ ಪ್ರಜ್ಞೆ, ಮಾರ್ದವತೆ, ಸಮಾಜಮುಖಿ ಚಿಂತನೆ, ಮಾನವೀಯ ಮೌಲ್ಯಗಳ ಪರವಾಗಿ ಹರಿಯುವ ಭಾವನೆಗಳು ಓದುಗರ ಮನಸ್ಸನ್ನಾವರಿಸುತ್ತವೆ. ಪರಿಶುದ್ಧ ಭಾವನೆಗಳ ಮೌಲ್ಯ ವಿವೇಚನೆ, ಮಾನವೀಯ ಅನುಕಂಪ, ಸಾಮಾಜಿಕ ಚಿಂತನೆಗಳು ಕವಿತೆಯಲ್ಲಿ ಮುಪ್ಪರಿಗೊಂಡು ಇಲ್ಲಿ ಅಭಿವ್ಯಕ್ತಿತವಾಗಿವೆ. ಸಹಜ ಪ್ರಾಸಗಳೊಂದಿಗೆ ಜೀವನದ ಗಂಭೀರ ಅನುಭವಗಳನ್ನು ಓದುಗನಿಗೆ ಅಡಕವಾದ ಭಾಷೆಯಲ್ಲಿ ತಿಳಿಸಿದ್ದಾರೆ.

ಮನ ಮಿಡಿಯುವಂತೆ, ಹೃದಯ ತುಡಿಯುವಂತೆ ಮೂಡಿರುವ ಕವಿತೆಗಳು ಸಾರ್ಥಕತೆ ಪಡೆದಿವೆ. ಈ ಕವನ ಸಂಕಲನ ನಮ್ಮ ಜ್ಞಾನಪೀಠ ಪ್ರಕಾಶನಕ್ಕೆ ಹೆಮ್ಮೆ. ಹೀಗೆಯೇ ನಿಮಗೂ ಮೆಚ್ಚುಗೆ ಆಗುತ್ತದೆಂದು ಭಾವಿಸುತ್ತೇನೆ. ಪುಸ್ತಕ ಪ್ರಕಟಣೆಗೆ ಸಹಕರಿಸಿದ ಎಲ್ಲಾ ಮಹನೀಯರಿಗೂ, ಪುಸ್ತಕಗಳನ್ನು ಕೊಂಡು ಓದುವ ಸಹೃದಯರಿಗೂ ನನ್ನ ಅನಂತ ಕೃತಜ್ಞತೆಗಳು.

– ಸಬ್ಬಗೆರೆ ವೆಂಕಟೇಶ್
ಪ್ರಕಾಶಕ, ಜ್ಞಾನಪೀಠ ಪ್ರಕಾಶನ