mukta_kavyaದೊಡ್ಡರಂಗೇಗೌಡರು ನಾಲ್ಕು ದಶಕಗಳ ಕಾಲ ಸುದೀರ್ಘ ಕಾಲಾವಧಿಯಲ್ಲಿ ನಿರಂತರವಾಗಿ ಕಾವ್ಯ ಪ್ರಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ. ಅವರ ಕಾವ್ಯದ ವೈಶಿಷ್ಟ್ಯವೆಂದರೆ ಜಾನಪದ ಸತ್ವ ಮತ್ತು ಭಾವಗೀತೆಯ ಲಾಲಿತ್ಯ. ಹಳ್ಳಿಯ ಭಾಷೆಯನ್ನು ಗೌಡರಂತೆ ವಿಸ್ತೃತ ಪ್ರಮಾಣದಲ್ಲಿ ಕನ್ನಡಕ್ಕೆ ತಂದ ಕವಿಗಳು ಹೆಚ್ಚು ಜನರಿಲ್ಲ. ಹಾಗೇ ಪ್ರಸಾನುಪ್ರಾಸಗಳಿಂದ ಕೂಡಿದ ಅವರ ಪದ್ಯಗಳ ಲಯಗಾರಿಕೆ ಹಾಡುಗಾರರಿಗೆ ಮೋಡಿ ಮಾಡುವಂಥದು.

ದೊಡ್ಡರಂಗೇಗೌಡರು ಸಾಮಾಜಿಕ ಕಾಳಜಿಯುಳ್ಳ, ಶೋಷಿತರ ಬಗ್ಗೆ ಅನುಕಂಪವುಳ್ಳ ಮಾನವೀಯ ಮನೋಭಾವದ ಮುಗ್ಧ ಹಾಗೂ ಸ್ನೇಹಶೀಲ ಕವಿ. ಈ ವಯಸ್ಸಿನಲ್ಲೂ ಅವರು ತಮ್ಮ ಬಾಲ್ಯದ ಮುಗ್ಧತೆಯನ್ನೇ ಉಳಿಸಿಕೊಂಡಿದ್ದಾರೆ. ರಮ್ಯ ಕಾವ್ಯದ ಆದರ್ಶಪ್ರಿಯತೆ, ಕನಸುಗಾರಿಕೆ ಗೌಡರ ಕಾವ್ಯದಲ್ಲಿ ರಾಗರಂಗುಗಳೊಂದಿಗೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ತಮ್ಮ ಭಾವಗೀತೆಗಳು ಮತ್ತು ಚಿತ್ರಗೀತೆಗಳ ಮೂಲಕ ಕನ್ನಡ ನಡಿನಲ್ಲಿ ಮನೆ ಮಾತಾಗಿರುವ ದೊಡ್ಡರಂಗೇಗೌಡರು ಒಳ್ಳೆಯ ವಾಗ್ಮಿ ಮತ್ತು ಪ್ರಭಾವಶಾಲಿ ಪ್ರಾಧ್ಯಾಪಕರೂ ಹೌದು.

ದೊಡ್ಡರಂಗೇಗೌಡರು ಕನ್ನಡ ಕಾವ್ಯ ಪರಂಪರೆಯ ಬಗ್ಗೆ ಆಳವಾದ ಅರಿವುಳ್ಳ ಕವಿ. ಹಾಗಾಗಿ ಪ್ರಸಿದ್ಧ ಹಳೆಗನ್ನಡ ಮತ್ತು ಹೊಸಗನ್ನಡ ಕವಿಗಳ ಉತ್ತಮ ಅಂಶಗಳನ್ನು ಅರ್ಥಪೂರ್ಣ ಕಾವ್ಯದಲ್ಲಿ ಆರೋಗ್ಯಕರವಾದ ರೀತಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಅವರ ತಾತ್ವಿಕ ಮುಕ್ತಕಗಳು ಕವಿಯ ವೈಯಕ್ತಿಕ ಅನುಭವ ಮತ್ತು ಪಾರಂಪರಿಕ ಅರಿವಿನ ಫಲಗಳಾಗಿವೆ. ತಮ್ಮ ಭಾವಗೀತೆಗಳು ಮುಕ್ತಕಗಳ ಜೊತೆಯಲ್ಲೇ ಗೌಡರು ಕಥನಕಾವ್ಯ, ಚಂಪೂಕಾವ್ಯ, ಲಾವಣಿ, ತ್ರಿಪದಿ, ಚೌಪದಿ, ಪ್ರಗಾಥ ಮುಂತಾಗಿ ಅನೇಕ ಬಗೆಯ ಕಾವ್ಯ ಪ್ರಯೋಗಗಳನ್ನೂ ಮಾಡಿದ್ದಾರೆ.

ಜನರ ಭಾಷೆಯನ್ನು ಜನಪರವಾದ ಕಾವ್ಯಭಾಷೆಯಾಗಿ ಪರಿವರ್ತಿಸಬೇಕು, ಜನರ ನೋವು – ನಲಿವುಗಳಿಗೆ ನುಡಿಗೊಡಬೇಕು. ಕಾವ್ಯದ ಮೂಲಕ ಸಮಾಜವನ್ನು ಪ್ರಗತಿಯ ಕಡೆ ಕೊಂಡೊಯ್ಯಬೇಕು ಎಂಬ ದೃಢ ನಿಲುವಿನ ಕವಿ ದೊಡ್ಡರಂಗೇಗೌಡರು. ಇವರು ಕನ್ನಡದಲ್ಲಿ ಅಪಾರವಾದ ಜನಪ್ರೀತಿ ಪಡೆದ ಕವಿಯಾಗಿದ್ದಾರೆ.

– ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯ