Categoryಕೃತಿಗಳು

ಹಳ್ಳಿ ಹೈದ

halli_haydaಭಾರತದಲ್ಲಿ ಬಹುತೇಕ ಜನ ಮೂಲತಃ ಹಳ್ಳಿಯವರೇ! ಹಳ್ಳಿಗೆ ತನ್ನದೇ ಆದ ಜಗತ್ತೊಂದು ಇದ್ದೇ ಇದೆ. ಅಲ್ಲಿನ ಅನುಭವಗಳೇ ವಿಶಿಷ್ಟ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಹುಟ್ಟಿದ ಹಳ್ಳಿ ಹೈದರ ಅನುಭವ ಲೋಕ ಕೂಡಾ ವಿಶಿಷ್ಟವಾದುದೇ; ಅಂಥ ಅನೇಕಾನೇಕ ಹಳ್ಳಿ ಹೈದರಲ್ಲಿ ನಾನೂ ಒಬ್ಬ.
ಇಲ್ಲಿನ ಪದ್ಯಗಳು ಹಳ್ಳಿ ಅನುಭವವನ್ನೇ ನಮ್ಮೂರ ನುಡಿಗಟ್ಟಿನಲ್ಲಿ ಕಟ್ಟಿ ಕೊಡುತ್ತವೆ. ಒಂದು ಹಳ್ಳಿಯ ಸಾಂಸ್ಕೃತಿಕ ಅನಾವರಣಕ್ಕೆ ಇಂಥ ಪದ್ಯಗಳೂ ಸಹ ಕಿಟಕಿ, ಬಾಗಿಲು, ಗವಾಕ್ಷಿಗಳೇ ಎಂಬುದು ನನ್ನ ನಂಬಿಕೆ !
ಹೀಗಾಗಿ ಇಲ್ಲೊಂದು ಹಳ್ಳಿಯ ಎಲ್ಲೆ ಕಟ್ಟಿದೆ. ದೇಸಿ ನುಡಿ-ಪಟ್ಟೂ ಇದೆ. ಅವರೆಕಾಯಿ ಸೊಗಡಿನ ವಿಶಿಷ್ಟ ಪರಿಮಳವೂ ಇರಲಿಕ್ಕೆ ಸಾಕು.
ನನ್ನ ಬಾಲ್ಯದ ಬೆಳ್ಳಿಯ ದಿನಗಳ, ಬಂಗಾರದ ಕ್ಷಣಗಳ, ಮಣ್ಣಿನ ವಾಸನೆಯೇ ಇಲ್ಲಿ ನುಡಿ ನುಡಿಯಲ್ಲಿ ಪಲ್ಲವಿಸಿದೆ. ಪ್ರಿಯ ಓದುಗರೇ, ಇದು ನಿಮಗಿಷ್ಟವಾಗಬಹುದು. ಓದಿ ನೋಡಿ.

_ ದೊ.ರಂ.ಗೌ

ಅಧ್ಯಯನ ಅನಾವರಣ

adyayana_anavarana“ಅಧ್ಯಯನ ಅನಾವರಣ” ಇದು ಸಂಡೇ ಟೈಮ್ಸ್ ಪುಸ್ತಕ ಪರಿಚಯ ಅಂಕಣ ಬರಹಗಳ ಸಂಕಲನ. ಇಲ್ಲಿ ಸಂಕಲಿತವಾಗಿರುವ ಬರಹಗಳು ಕೂದಲು ಸೀಳುವ ವಿಮರ್ಶೆಗಳಲ್ಲ. ಶ್ರೀಸಾಮಾನ್ಯನಿಗೂ ಅರ್ಥವಾಗುವ, ಓದಿನ ಬಗೆಗೆ ಆಸಕ್ತಿ ಮೂಡಿಸುವ ಕಳಕಳಿ ಇಲ್ಲಿದೆ. ಕವಿ, ವಿದ್ವಾಂಸ, ವಿಮರ್ಶಕ ಡಾ. ದೊಡ್ಡರಂಗೇಗೌಡರು ವಿದೇಶಿ ವಿಮರ್ಶಾ ತತ್ವಗಳ ಹಿನ್ನೆಲೆಯಲ್ಲಿ ಕೂದಲು ಸೀಳುವ ವಿಮರ್ಶಾ ತತ್ವಗಳನ್ನು ಅಳವಡಿಸದೆ ದೇಸೀ ನೆಲೆಗಟ್ಟಿನಲ್ಲಿ ಸಹೃದಯ ವಿಮರ್ಶೆಗೆ ತೊಡಗಿರುವುದು ಕಂಡುಬರುತ್ತದೆ. ಬರಹಗಾರ ಮತ್ತು ಓದುಗರ ನಡುವಿನ ಸೇತುವಾಗಿ ಡಾ. ದೊಡ್ಡರಂಗೇಗೌಡರ ಬರಹಗಳು ಇಲ್ಲಿ ಮೈತಳೆದಿವೆ. ಧಾತ್ರಿ ಪುಸ್ತಕ ಪ್ರಕಾಶನ ಸಂಸ್ಥೆಯು ಈ ಕೃತಿಯನ್ನು ಹೆಮ್ಮೆಯಿಂದ ಪ್ರಕಟಿಸಿದೆ

ಅಸೀಮ ರೂಪಿ

aseema_rupiಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವ ನಿಸರ್ಗ – ಸೀಮ ರೂಪಿ ; ವ್ಯೋಮ – ಅಸೀಮ ರೂಪಿ; ಭೂಮಿಯೂ ಅಷ್ಟೇ; ಭಾನೂ ಅಷ್ಟೇ. ಅಂಥ ಅನೂಹ್ಯ ಪ್ರಕೃತಿಯನ್ನು ಅರಿಯುವ ಪ್ರಯತ್ನ ನಿರಂತರವಾಗಿ ಮಾನವನಿಂದ ನಡೆಯುತ್ತಿದ್ದರೂ ಕವಿಯು ವಿಜ್ಞಾನಿಯಂತೆ ವಿಶ್ಲೇಷಣೆಗೆ ತೊಡಗದೆ ಅವನ ಭಾವುಕ ಸ್ಪಂದನಗಳನ್ನೇ ಕವಿತೆಗಳಲ್ಲಿ ದಾಖಲಿಸುತ್ತಾ ಹೋಗುತ್ತಾನೆ. ಇದು ಸಹಜವಾದ ಸೃಜನಶೀಲ ಪ್ರಕ್ರಿಯೆ. ನಾನೂ ಇದಕ್ಕೆ ಹೊರತಾಗಿಲ್ಲ.
ಯಾವಾಗ ನನ್ನ ಹೃನ್ಮನ ಸ್ಪಂದಿಸುತ್ತದೆ, ಆಗ ನನ್ನ ಭಾವನಾತ್ಮಕ ಸ್ಪಂದನ. ಯಾವಾಗ ನಾನು ವಿಚಾರದ ಮೊರೆ ಹೋಗುತ್ತೇನೆ, ಆಗ ವೈಚಾರಿಕ ಕವನ. ಎರಡೂ ರೀತಿಯಲ್ಲಿ ನನ್ನ ಸಾಹಿತ್ಯ ಸೃಷ್ಟಿ ಸಾಗಿಯೇ ಇದೆ.
ಇಲ್ಲಿ ಅಂಥ ಅನೇಕ ಕವಿತೆಗಳು ನನ್ನಿಂದ ರಚಿತವಾಗಿ ಸಂಕಲಿತಗೊಂಡಿವೆ. ಅನೇಕ ಗೀತೆಗಳು ಹಾಡಿಕೊಳ್ಳಲು ಬರುತ್ತವೆ. ಅಂಥವುಗಳನ್ನು ಹಾಡಿಕೊಂಡರೇ ಚೆಂದ. ಮತ್ತೆ ಕೆಲವು ಓದಲು ಸೂಕ್ತವಾಗಿವೆ. ಅಲ್ಲಿ ವಿಚಾರ ರತಿ ಇದೆ; ವೈಚಾರಿಕ ಗತಿಯೂ ಇದೆ. ಈ ಎಲ್ಲವೂ ಓದುಗರಿಗೆ ಪ್ರಿಯವಾದರೆ, ನಾನು ಬರೆದುದಕ್ಕೂ ಸಾರ್ಥಕ; ಪ್ರಕಾಶಕರು ಮುದ್ರಿಸಿದ್ದಕ್ಕೂ ಸಾರ್ಥಕ.