Categoryಕೃತಿಗಳು

ಮುಕ್ತ ಕಾವ್ಯ

mukta_kavyaದೊಡ್ಡರಂಗೇಗೌಡರು ನಾಲ್ಕು ದಶಕಗಳ ಕಾಲ ಸುದೀರ್ಘ ಕಾಲಾವಧಿಯಲ್ಲಿ ನಿರಂತರವಾಗಿ ಕಾವ್ಯ ಪ್ರಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ. ಅವರ ಕಾವ್ಯದ ವೈಶಿಷ್ಟ್ಯವೆಂದರೆ ಜಾನಪದ ಸತ್ವ ಮತ್ತು ಭಾವಗೀತೆಯ ಲಾಲಿತ್ಯ. ಹಳ್ಳಿಯ ಭಾಷೆಯನ್ನು ಗೌಡರಂತೆ ವಿಸ್ತೃತ ಪ್ರಮಾಣದಲ್ಲಿ ಕನ್ನಡಕ್ಕೆ ತಂದ ಕವಿಗಳು ಹೆಚ್ಚು ಜನರಿಲ್ಲ. ಹಾಗೇ ಪ್ರಸಾನುಪ್ರಾಸಗಳಿಂದ ಕೂಡಿದ ಅವರ ಪದ್ಯಗಳ ಲಯಗಾರಿಕೆ ಹಾಡುಗಾರರಿಗೆ ಮೋಡಿ ಮಾಡುವಂಥದು.

ದೊಡ್ಡರಂಗೇಗೌಡರು ಸಾಮಾಜಿಕ ಕಾಳಜಿಯುಳ್ಳ, ಶೋಷಿತರ ಬಗ್ಗೆ ಅನುಕಂಪವುಳ್ಳ ಮಾನವೀಯ ಮನೋಭಾವದ ಮುಗ್ಧ ಹಾಗೂ ಸ್ನೇಹಶೀಲ ಕವಿ. ಈ ವಯಸ್ಸಿನಲ್ಲೂ ಅವರು ತಮ್ಮ ಬಾಲ್ಯದ ಮುಗ್ಧತೆಯನ್ನೇ ಉಳಿಸಿಕೊಂಡಿದ್ದಾರೆ. ರಮ್ಯ ಕಾವ್ಯದ ಆದರ್ಶಪ್ರಿಯತೆ, ಕನಸುಗಾರಿಕೆ ಗೌಡರ ಕಾವ್ಯದಲ್ಲಿ ರಾಗರಂಗುಗಳೊಂದಿಗೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ತಮ್ಮ ಭಾವಗೀತೆಗಳು ಮತ್ತು ಚಿತ್ರಗೀತೆಗಳ ಮೂಲಕ ಕನ್ನಡ ನಡಿನಲ್ಲಿ ಮನೆ ಮಾತಾಗಿರುವ ದೊಡ್ಡರಂಗೇಗೌಡರು ಒಳ್ಳೆಯ ವಾಗ್ಮಿ ಮತ್ತು ಪ್ರಭಾವಶಾಲಿ ಪ್ರಾಧ್ಯಾಪಕರೂ ಹೌದು.

ದೊಡ್ಡರಂಗೇಗೌಡರು ಕನ್ನಡ ಕಾವ್ಯ ಪರಂಪರೆಯ ಬಗ್ಗೆ ಆಳವಾದ ಅರಿವುಳ್ಳ ಕವಿ. ಹಾಗಾಗಿ ಪ್ರಸಿದ್ಧ ಹಳೆಗನ್ನಡ ಮತ್ತು ಹೊಸಗನ್ನಡ ಕವಿಗಳ ಉತ್ತಮ ಅಂಶಗಳನ್ನು ಅರ್ಥಪೂರ್ಣ ಕಾವ್ಯದಲ್ಲಿ ಆರೋಗ್ಯಕರವಾದ ರೀತಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಅವರ ತಾತ್ವಿಕ ಮುಕ್ತಕಗಳು ಕವಿಯ ವೈಯಕ್ತಿಕ ಅನುಭವ ಮತ್ತು ಪಾರಂಪರಿಕ ಅರಿವಿನ ಫಲಗಳಾಗಿವೆ. ತಮ್ಮ ಭಾವಗೀತೆಗಳು ಮುಕ್ತಕಗಳ ಜೊತೆಯಲ್ಲೇ ಗೌಡರು ಕಥನಕಾವ್ಯ, ಚಂಪೂಕಾವ್ಯ, ಲಾವಣಿ, ತ್ರಿಪದಿ, ಚೌಪದಿ, ಪ್ರಗಾಥ ಮುಂತಾಗಿ ಅನೇಕ ಬಗೆಯ ಕಾವ್ಯ ಪ್ರಯೋಗಗಳನ್ನೂ ಮಾಡಿದ್ದಾರೆ.

ಜನರ ಭಾಷೆಯನ್ನು ಜನಪರವಾದ ಕಾವ್ಯಭಾಷೆಯಾಗಿ ಪರಿವರ್ತಿಸಬೇಕು, ಜನರ ನೋವು – ನಲಿವುಗಳಿಗೆ ನುಡಿಗೊಡಬೇಕು. ಕಾವ್ಯದ ಮೂಲಕ ಸಮಾಜವನ್ನು ಪ್ರಗತಿಯ ಕಡೆ ಕೊಂಡೊಯ್ಯಬೇಕು ಎಂಬ ದೃಢ ನಿಲುವಿನ ಕವಿ ದೊಡ್ಡರಂಗೇಗೌಡರು. ಇವರು ಕನ್ನಡದಲ್ಲಿ ಅಪಾರವಾದ ಜನಪ್ರೀತಿ ಪಡೆದ ಕವಿಯಾಗಿದ್ದಾರೆ.

– ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯ

ಮಿಂಚಿನ ಗೊಂಚಲು

minchina_gonchaluಡಾ|| ದೊಡ್ಡರಗೇಗೌಡರ ಮಿಂಚಿನ ಗೊಂಚಲು ಕವನ ಸಂಕಲನದಲ್ಲಿ ವಿಶಿಷ್ಠ ಬಗೆಯ ಕವನಗಳಿವೆ. ಶ್ರೀಯುತರು ಕವಿಯಾಗಿ, ವಿಮರ್ಶಕರಾಗಿ, ಪ್ರಬಂಧಕಾರರಾಗಿ ಅತ್ಯುತ್ತಮ ಪ್ರಾಧ್ಯಾಪಕರಾಗಿ, ಜಾನಪದ ತಜ್ಞರಾಗಿ, ಗಾಯಕರಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸೃಜನಶೀಲ ಮಾಧ್ಯಮದ ಜೊತೆಗೆ ಚಲನಚಿತ್ರ ಹಾಗೂ ಟಿವಿ ಧಾರಾವಾಹಿಗಳಿಗೆ ಸಾಹಿತ್ಯ, ಸಂಭಾಷಣೆ, ಹಾಡುಗಳನ್ನು ಬರೆಯುವುದರ ಮೂಲಕ ಇತರೆ ಕ್ಷೇತ್ರಗಳಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

ಇವೆಲ್ಲಕ್ಕಿಂತ ಹೆಚ್ಚಾಗಿ ದೊಡ್ಡರಂಗೇಗೌಡರ ದೊಡ್ಡ ಗುಣ ಸಹೃದಯತೆ. ಬಹುಮುಖ ಪ್ರತಿಭೆಯ ಆಶಾಜೀವಿ. ಮುಗ್ಧ ಮನಸ್ಸಿನವರು. ಯಾರನ್ನೂ ದ್ವೇಶಿಸದವರು. ಮೃದು ಮನಸ್ಸಿನವರು. ಸರಳ ಜೀವಿಗಳು. ಎಲ್ಲರನ್ನೂ ಪರೀತಿಸುತ್ತಾರೆ. ಗೌಡರನ್ನೂ ನಾನು ಕಾಲೇಜಿನಲ್ಲಿ ಓದುತ್ತಿದ್ದಾಗಿನಿಂದಲೂ ಬಲ್ಲೆ. ಆಗ ಹೇಗಿದ್ದರೋ ಈಗಲೂ ಹಾಗೇ, ಅಷ್ಟೇ ಪ್ರೀತಿ ವಿಶ್ವಾಸ, ಗೌರವ.

ಡಾ|| ದೊಡ್ಡ ರಂಗೇಗೌಡರು ನಮ್ಮ ಪ್ರಕಾಶನದ ಮೇಲೆ ಅಪಾರ ಪ್ರೀತಿ ಇಟ್ಟ ನನ್ನ ಬದುಕಿನ ಆದರ್ಶ ಗುರು ಹಾಗೂ ಲೇಖಕರು. ಅವರ ಎರಡು ಪುಸ್ತಕಗಳು ಈಗಾಗಲೇ ನಮ್ಮ ಪ್ರಕಾಶನದಿಂದ ಪ್ರಕಟವಾಗಿ ಓದುಗರನ್ನು ತಲುಪಿವೆ. ಇದೀಗ ಮೂರನೇ ಪುಸ್ತಕ. ಭಾವಗೀತೆಗಳ ಕವನ ಸಂಕಲನ ಮಿಂಚಿನ ಗೊಂಚಲು ನಿಮ್ಮ ಕೈಯಲ್ಲಿದೆ.

ಇಲ್ಲಿನ ಬಹುಪಾಲು ಕವನಗಳಲ್ಲಿಯ ಸೌಮ್ಯ ಚೆಲುವು, ಪ್ರೀತಿ, ಸಮಷ್ಠಿ ಪ್ರಜ್ಞೆ, ಮಾರ್ದವತೆ, ಸಮಾಜಮುಖಿ ಚಿಂತನೆ, ಮಾನವೀಯ ಮೌಲ್ಯಗಳ ಪರವಾಗಿ ಹರಿಯುವ ಭಾವನೆಗಳು ಓದುಗರ ಮನಸ್ಸನ್ನಾವರಿಸುತ್ತವೆ. ಪರಿಶುದ್ಧ ಭಾವನೆಗಳ ಮೌಲ್ಯ ವಿವೇಚನೆ, ಮಾನವೀಯ ಅನುಕಂಪ, ಸಾಮಾಜಿಕ ಚಿಂತನೆಗಳು ಕವಿತೆಯಲ್ಲಿ ಮುಪ್ಪರಿಗೊಂಡು ಇಲ್ಲಿ ಅಭಿವ್ಯಕ್ತಿತವಾಗಿವೆ. ಸಹಜ ಪ್ರಾಸಗಳೊಂದಿಗೆ ಜೀವನದ ಗಂಭೀರ ಅನುಭವಗಳನ್ನು ಓದುಗನಿಗೆ ಅಡಕವಾದ ಭಾಷೆಯಲ್ಲಿ ತಿಳಿಸಿದ್ದಾರೆ.

ಮನ ಮಿಡಿಯುವಂತೆ, ಹೃದಯ ತುಡಿಯುವಂತೆ ಮೂಡಿರುವ ಕವಿತೆಗಳು ಸಾರ್ಥಕತೆ ಪಡೆದಿವೆ. ಈ ಕವನ ಸಂಕಲನ ನಮ್ಮ ಜ್ಞಾನಪೀಠ ಪ್ರಕಾಶನಕ್ಕೆ ಹೆಮ್ಮೆ. ಹೀಗೆಯೇ ನಿಮಗೂ ಮೆಚ್ಚುಗೆ ಆಗುತ್ತದೆಂದು ಭಾವಿಸುತ್ತೇನೆ. ಪುಸ್ತಕ ಪ್ರಕಟಣೆಗೆ ಸಹಕರಿಸಿದ ಎಲ್ಲಾ ಮಹನೀಯರಿಗೂ, ಪುಸ್ತಕಗಳನ್ನು ಕೊಂಡು ಓದುವ ಸಹೃದಯರಿಗೂ ನನ್ನ ಅನಂತ ಕೃತಜ್ಞತೆಗಳು.

– ಸಬ್ಬಗೆರೆ ವೆಂಕಟೇಶ್
ಪ್ರಕಾಶಕ, ಜ್ಞಾನಪೀಠ ಪ್ರಕಾಶನ

ಕಾವ್ಯ ಕಾರಂಜಿ

kavya_karanjiನಾನು ಯಾವ ಗಳಿಗೆ ಭಾವನಾತ್ಮಕವಾಗಿ ಹಾಡಿಕೊಳ್ಳಲು ಪ್ರಾರಂಭಿಸಿದೆನೋ, ಖಂಡಿತಾ ಅರಿಯಲಾರೆ ! ಅಂದಿನಿಂದ ಇಂದಿನ ತನಕ ಹಾಡಿಕೊಳ್ಳುತ್ತಲೇ ಬಂದಿದ್ದೇನೆ.

ಹಾಡು ನನ್ನ ಜೀವನದ ಅನಿವಾರ್ಯ ಭಾವಗಂಗೆ. ಹರಿಯುತ್ತಲೇ ಇದೆ, ನಿರಂತರ. ಯಾರೂ, ಕಲಿತ ಮತುಗಳನ್ನೆಲ್ಲ ಬರೆಯುವುದಿಲ್ಲ. ಬರೆದರೂ ಅವು ಹಾಡುಗಳು ಆಗುವುದಿಲ್ಲ!

ಹಾಡಲ್ಲಿ ಪಾಡಿದೆ, ಕವಿ ಜೀವನದ ಏರಿಳಿತದ ಜಾಡಿದೆ. ನೋಡಿದ್ದೂ, ಕೂಡಿದ್ದೂ ಬಾಡಿದ್ದೂ, ಬೇಡಿದ್ದೂ, ತೀಡಿದ್ದೂ, ತಿದ್ದಿದ್ದೂ, ಎದ್ದದ್ದೂ, ಬಿದ್ದದ್ದೂ, ಗುದ್ದಿದ್ದೂ… ಎಲ್ಲಾ… ಎಲ್ಲವೂ ಅಲ್ಲಿ ಕವಿಗೆ ಅರಿವಿಲ್ಲದೆ ಮನದ ಒಳಗಿನೊಳಗಿನ ಪಾತಳಿಯಲ್ಲಿ ಅನುಭವವಾಗಿ ಬೆರೆತಿರುತ್ತವೆ.

ನಾನು ಮೂಡುವ – ಮುಳುಗುವ ರವಿಯಲ್ಲಿ, ಬೆಳಗುವ ಚಂದ್ರನಲ್ಲಿ, ಹೊಳೆಯುವ ಚುಕ್ಕಿಗಳಲ್ಲಿ, ಬೀಸುವ ಗಾಳಿಯಲ್ಲಿ, ಹರಿಯುವ ನದಿಯಲ್ಲಿ, ಸುಮ್ಮನೆ ಧ್ಯಾನಸ್ಥವಾಗಿ ಕುಳಿತ ಬೆಟ್ಟಗುಡ್ಡಗಳ ಪ್ರಶಾಂತ ಭಂಗಿಗಳಲ್ಲಿ… ಅತ್ಯತ್ತಮವಾದ ಭಾವನಾತ್ಮಕವಾದ ಹಾಡುಗಳ ಕಂಡುಕೊಂಡೆ.

ಈಗಲೂ ನನ್ನ ಹುಡುಕಾಟ ನಡೆದೇ ಇದೆ ! ಏನೆಂದರೆ, ಈಗ … ಮನೆಯಂಗಳದಲ್ಲಿ, ಮನೆಯೊಳಗೆ, ಬೀದಿಗಳಲ್ಲಿ …. ಪಾಡಿರುವುದು ನನಗೆ ಅರಿವಾದಾಗ ಹಾಡುಗಳ ಮರೆಯದೆ ಬರೆದಿಡುತ್ತೇನೆ.

ಮನಸ್ಸಿನಲ್ಲಿ ಮೂಡಿದ, ಮೂಡಿ ಮರೆತು ಹೋದ ಸಾಲುಗಳು ಅನೇಕ. ಎಷ್ಟೋ ವೇಳೆ ಅಪೂರ್ವ ಪಲ್ಲವಿಗಳು ಮನದಲ್ಲಿ ಪಲ್ಲವಿಸಿದಾಗ, ಬರೆದಿಡುವ ವ್ಯವಧಾನವಿಲ್ಲದೆ ಹೋದುದರಿಂದ, ಅವುಗಳು ಸಂಪೂರ್ಣ ಮರೆತು ಹೋಗಿವೆ.

ಮರೆತು ಹೋಗದೆ ಉಳಿದ …. ಪೆನ್ನು ಹಾಳೆಗಳಿಂದ ಆಕಾರ ಪಡೆದ … ಕೆಲವು ಪದ್ಯಗಳು ಮಾತ್ರ ಇಲ್ಲಿವೆ.

ಪ್ರಿಯ ಓದುಗರೇ, ಇವು ನಿಮಗಾಗಿ. ಹೃನ್ಮನ ಮುದಕ್ಕಾಗಿ…. ಒಬ್ಬ ಕವಿ ತನ್ನ ನಾಡಿನ ಜನರಿಗೆ ಇದಕ್ಕಿಂತ ಇನ್ನೇನು ತಾನೆ ಕೊಡಲು ಸಾಧ್ಯ ?

ಸಹೃದಯರೇ, ಸ್ಪಂದಿಸಿ… ಪ್ರತಿಕ್ರಿಯಿಸಿ…

– ದೊ.ರಂ.ಗೌ

ಕಾವ್ಯ ಕಲ್ಯಾಣಿ

kavya_kalyaniಕಾವ್ಯ ಕಲ್ಯಾಣಿ : ನಿತ್ಯ ಕಾಯಕದಿ, ಕನ್ನಡ ಮಣ್ಣ ಸೊಗಡಿನ ಸಾರವನು ಸಾಹಿತ್ಯದಿ ಸಾಲುಗಟ್ಟಿ, ಭಾಮಯವಾಗಿ ಗೀತೆಯಾಗಿಸಿದ ಕೌಶಲದ ಕುಶಲ ಸಾಹಿತ್ಯ ಶಿಲ್ಪಿ, ಕವಿ ಡಾ. ದೊಡ್ಡರಂಗೇಗೌಡರು. ನಾಡಿನ ಬಹುದೊಡ್ಡ ಸಾಹಿತ್ಯದ ಹೆಮ್ಮರ. ಹೆಸರೇ ಮನಕ್ಕೆ ಚೇತನವನ್ನು ತುಂಬುವಂಥದ್ದು. ಬೆಳುದಿಂಗಳ ತಂಪಲ್ಲಿ ನೆನೆಯುವ ವ್ಯಕ್ತಿತ್ವದ ಸಾಕಾರ ಮೂರ್ತಿ. ಸಾಹಿತ್ಯಾಸಕ್ತ ಅಭಿಮಾನಿಗಳ ಹೃನ್ಮನದಿ ವಿರಾಜಮಾನರು. ಚಲನಚಿತ್ರ ಗೀತೆಗಳಲಿ ಕೇಳುಗನೆದೆಯ ಅಭಿಮಾನದ ಉತ್ತುಂಗದಿ, ಜಾನಪದದ ಹಳ್ಳಿಗನ ನೈಜ ಬದುಕ ಬೆವರ ಹನಿಹನಿಗೆ ಜೇನ್ನುಡಿಯಲಿ ಗೀತೆಯನು ನಮಗಿತ್ತವರು. ಎಂದೂ ಬಿಗುಮಾನ ಬಿಮ್ಮಲಿ ಎದೆ ಏರಿಸಿ ಇನ್ನೊಬ್ಬರ ಹಳಿದವರಲ್ಲ. ಕಿರಿಯರ ದಾರಿಗೆ ಬೆಳಕನಿಡಿವ ಸಿರಿ ಹಣತೆಯ ಗುರುವಿನಂತೆ, ಗರಿಬಿಚ್ಚಿ ಹಾರ ಬಯಸುವ ಹಕ್ಕಿಗಳಿಗೆ ವಿಶಾಲ ಬಾನ ತೋರಿ ಹಾರೆನ್ನುವ ಹಿರಿಯ ಮನದವರು…

ವಿಶಾಲ ರೆಂಬೆ ಕೊಂಬೆಗಳಲಿ ಗೂಡು – ಜೋಗುಳದ ಹಾಡು
ವಿಹಾರಕ್ಕೆ ನೆರಳು, ಹಣ್ಣು, ತಂಗಾಳಿಯಲಿ ಚಿಲಿಪಿಲಿ ಹಾಡು
ಜೀಕಲು ಜೋಕಾಲಿ, ಹಕ್ಕಿಪಕ್ಕಿಗಳಿಗಹೆ ಆಶ್ರಯದ ತವರು ಗೂಡು
ಅವರುಇವರುಅನ್ಯರೆನದೆತನ್ನವರೆಂದುತಬ್ಬಿಕೊಳ್ಳುವಪಾಡು

ಕನ್ನಡದ ನೆಲೆ, ಜಲ, ಜನರ ಹೃದಯ ಹಾಡು ಹಗಲ ಹರಿಕಾರ… ಡಾ. ದೊಡ್ಡರಂಗೇಗೌಡರ ಪ್ರೀತಿಗೆ ಮಣಿದು ಗೌರವ ಪುನೀತತೆಯ ಧನ್ಯತೆಯಲಿ ಈ ಎದೆಯ ನುಡಿಯ ಅಡಿಗಿಟ್ಟಿರುವೆ.

– – ಬಾಗೂರು ಮಾರ್ಕಂಡೇಯ

ಕದಳಿ ಕರ್ಜೂರ

kadali_karjura

ಇಂದಿನ ಮೌಲಿಕ ಕನ್ನಡ ಸಾರಸ್ವತ ಲೋಕದಲ್ಲಿ ಡಾ|| ದೊಡ್ಡರಂಗೇಗೌಡರು ಮೇರು ಸದೃಶ ವ್ಯಕ್ತಿ. ಮಾತ್ರವಲ್ಲ ಶಕ್ತಿಯೂ ಹೌದು. ಶ್ರೀಯುತರು ಬಹುಶ್ರುತರಾಗಿದ್ದು ವಿದ್ಯೆ – ವಿನಯಗಳು ಅವರ ಜೀವನದಲ್ಲಿ ಹಾಸು ಹೊಕ್ಕಾಗಿ ಹೆಣೆದುಕೊಂಡಿವೆ.
ಅವರ ಬದುಕು – ಬರಹಗಳಲ್ಲಿ ಆಡಂಬರವಿಲ್ಲದ ಗ್ರಾಮೀಣ ಸೊಗಡು, ಮುಂಗಾರು ಮಳೆಗೆ ಘಮ್ಮೆಂದು ಹೊಮ್ಮುವ ನೆಲದ ವಾಸನೆ, ಜಾನಪದೀಯ ಶೈಲಿಯಲ್ಲಿ ಕವಿತೆಗಳನ್ನು ಕಟ್ಟಿಕೊಡುವ ಕೌಶಲ್ಯ ಗಟ್ಟಗೊಂಡಿದೆ.
ಅವರದು ಭೂಮಿ ತೂಕದ ಹಿಮಾಲಯ ಸದೃಶ ವ್ಯಕ್ತಿತ್ವ. ಬಹುಮುಖವಾದ ಪ್ರತಿಭೆ. ಶ್ರೀಯುತರ ನಡೆ – ನುಡಿಗಳಲ್ಲಿ, ಬದುಕು ಬರಹಗಳಲ್ಲಿ ಇಬ್ಬಂದಿತನವೆಂಬುದಿಲ್ಲ. ಎಂದಿಗೂ ಅವರು ಪಲಾಯನವಾದಿ ಎನಿಸಿಕೊಂಡವರಲ್ಲ. ಅವರಿವರ ನೋವು – ನಲಿವುಗಳಿಗೆ ಸಹಜವಾಗಿ ಸ್ಪಂದಿಸುತ್ತಾ ಜಾತಿ – ಮತ – ಪಂಥಗಳ ಉಪಾಧಿಯಿಂದ ಗಾವುದ ದೂರ ಸರಿದ ಮಾನವತಾವಾದಿ; ಸಮಾಜಮುಖಿ.

– ಸಿ ಜಯಣ್ಣ