IMG_20140623_0012‘ಅನಂತ ಪ್ರಗತಿ ಎಂಟರ್‌ಪ್ರೈಸಸ್‌‘ ಕೈಗೆತ್ತಿಕೊಂಡಿರುವ ಕಾರ್ಯ ಚಟುವಟಿಕೆಗಳಲ್ಲಿ ಪುಸ್ತಕ ಪ್ರಕಟಣೆಯೂ ಒಂದು. ಪುಸ್ತಕ ಸಂಸ್ಕೃತಿ ನಮ್ಮ ಭಾಷೆ, ಸಾಹಿತ್ಯಗಳ ಮೂಲಕ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಚೈತನ್ಯ ಶಕ್ತಿ. ಆ ಚೈತನ್ಯಶಕ್ತಿಯನ್ನು ಜೀವಂತವಾಗಿಡುವ ಉದ್ದೇಶದಿಂದಲೇ ನಾವು ವಸ್ತು ವಿಷಯಗಳಲ್ಲಿ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ.
ಪಾಶ್ಚತ್ಯ ವಿಮರ್ಶೆಯ ಮಾನದಂಡಗಳಿಗಿಂತಾ ನಮ್ಮ ನಾಡಿನ ಬೇರುಗಳಾದ ‘ಭಾರತೀಯ ಕಾವ್ಯ ಮೀಮಾಂಸೆ‘ ಹಾಗೂ ‘ಸಹೃದಯದ ತತ್ವ‘ವೇ ದೇಸಿ ಸಾಹಿತ್ಯ ಸೃಜನೆಗಳನ್ನು ಅಳೆಯುವ ಸರಿಯಾದ ಅಳತೆಗೋಲುಗಳು ಎಂದು ಪ್ರಖರವಾಗಿ ನಂಬಿರುವವರು ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ದೊಡ್ಡರಂಗೇ ಗೌಡರು.
ಇಲ್ಲಿ ಕೃತಿಯ ರಸಸ್ವಾದವೇ ಮುಖ್ಯ. ರಸಾನಂದವನ್ನು ಅನುಭವಿಸಿದ ಸಹೃದಯ ಯಾವ ಯಾವ ಕಾರಣಗಳಿಂದ ಕೃತಿ ತನ್ನ ಮನೋಮಂಡಲದ ಮೇಲೆ ಪ್ರಭಾವ ಬೀರಿತು ಎಂಬ ವಾಸ್ತವಾಂಶಗಳಿಗೆ ಸಮರ್ಥ ಅಭಿವ್ಯಕ್ತಿಯನ್ನು ನೀಡಿದ್ದಾರೆ ಇಲ್ಲಿನ ಲೇಖನಗಳಲ್ಲಿ.
ಹೀಗಾಗಿ ಅಭಿವ್ಯಕ್ತಿಯ ಹಿಂದಿನ ರಸಾನುಭವಗಳನ್ನು ಕಟ್ಟಿ ಕೊಡುವ ಬರಹಗಳು ಇಲ್ಲಿ ಸಂಕಲಿತವಾಗಿರುವುದರಿಂದ ಕೃತಿಯ ಆಂತರ್ಯ ಓದುಗರಿಗೆ ಹೊಸ ಅನುಭವದ ಮುದವನ್ನು ನೀಡುತ್ತದೆ. ತನ್ಮೂಲಕ ರಸಾನಂದವೇ ಇಲ್ಲಿನ ಗುರಿಯಾಗಿದೆ.

– ಡಾ. ಟಿ.ಎಸ್. ವಿಶ್ವನಾಥ್