Categoryಕೃತಿಗಳು

ನಾದ ನಿನಾದ

IMG_20140623_0010

ಭೃಂಗದ ಬೆನ್ನೇರಿ ಬಂತು…
ಯಾಕೆ ನನ್ನ ಅಂತರಾಳದಲ್ಲಿ ನಾದದ ಗುಂಗು ಬಂದು ಸೇರಿಕೊಂಡಿತೋ ನಾನರಿಯೆ! ಅದು ಎಂದು ಹೀಗೆ ಸುಭದ್ರವಾಗಿ ಬೇರೂರಿತೋ ಅದನ್ನೋ ನಾನು ತಿಳಿಯೆ! ಆದರೆ ಇದು ಸತ್ಯ. ಬರೆಯ ಹೊರಟರೆ ಮಾತು ಗೇತದೆಡೆಗೆ ಅಭಿಮುಖವಾಗುತ್ತದೆ. ಅದರಿಂದ ಸಲೀಸಾಗಿ ಬರೆದು ಬಿಡುತ್ತೇನೆ. ಎಲ್ಲವೂ ಹಾಡುವ ರೀತಿಯೇ ಅಭಿವ್ಯಕ್ತವಾಗುತ್ತದೆ. ಇಂಥ ಒಂದು ಅಪೂರ್ವ ಗುಂಗಿನಿಂದ ಹೊರ ಬರಲು ಪ್ರಯತ್ನಿಸಿದಾಗೆಲ್ಲಾ ನನ್ನೊಳಗೆ ನವ್ಯಕಾವ್ಯ ಶೈಲಿ ಅಂಕುರವಾಗಿದೆ. ಇನ್ನುಳಿದ ವೇಳೆ ಅದು ನಾದಮಯವೇ! ಗೀತಗಾರಿಕೆಯೇ! ರಮ್ಯವೇ!
ಇಂಥ ಬರಹದಲ್ಲೂ ಒಂದು ಬಗೆ ಖುಷಿ ಇದೆ; ಹೇಳಬೇಕಾದ್ದನ್ನು ಸಂಗೀತಕ್ಕೆ ಅಳವಡಿಸುವ ಹಾಗೇನೇ ಹೇಳುತ್ತಾ ಹೋಗುವುದೂ ಒಂದು ಬಗೆ ಅಭಿವ್ಯಕ್ತಿ ಮಾಧ್ಯಮವೇ!
ಸುಗಮ ಸಂಗೀತದ ರೂಪಣಕ್ಕೆ ಇಂಥ ಭಾವಾಭಿವ್ಯಕ್ತಿಯೇ ತಳಪಾಯ. ಗೀತೆಗಳಲ್ಲೂ ಚಿಂತನ-ಮಂಥನ ಇರಬಹುದು, ಇರಬಾರದೆಂದೇನೂ ಇಲ್ಲ. ಕೆಲವೊಮ್ಮೆ ತೆಳುವಾಗಿರಬಹುದಷ್ಟೇ…

ಇಷ್ಟಂತೂ ಸತ್ಯ. ನಾನು ಇಂಥ ಗೀತೆಗಳನ್ನು ಬರೆಯುವುದರ‍್ಲಿ ಒಂದು ಬಗೆ ಆನಂದವನ್ನು ಅನುಭವಿಸಿದ್ದೇನೆ. ಶೈಲಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದೇನೆ. ಇದನ್ನು ಸಹೃದಯರು ಪರಾಂಬರಿಸುತ್ತಾರೆಂದು ಭಾವಿಸಿದ್ದೇನೆ.
– ದೊಡ್ಡರಂಗೇಗೌಡ

ಅಭಿವ್ಯಕ್ತಿ

IMG_20140623_0012‘ಅನಂತ ಪ್ರಗತಿ ಎಂಟರ್‌ಪ್ರೈಸಸ್‌‘ ಕೈಗೆತ್ತಿಕೊಂಡಿರುವ ಕಾರ್ಯ ಚಟುವಟಿಕೆಗಳಲ್ಲಿ ಪುಸ್ತಕ ಪ್ರಕಟಣೆಯೂ ಒಂದು. ಪುಸ್ತಕ ಸಂಸ್ಕೃತಿ ನಮ್ಮ ಭಾಷೆ, ಸಾಹಿತ್ಯಗಳ ಮೂಲಕ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಚೈತನ್ಯ ಶಕ್ತಿ. ಆ ಚೈತನ್ಯಶಕ್ತಿಯನ್ನು ಜೀವಂತವಾಗಿಡುವ ಉದ್ದೇಶದಿಂದಲೇ ನಾವು ವಸ್ತು ವಿಷಯಗಳಲ್ಲಿ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ.
ಪಾಶ್ಚತ್ಯ ವಿಮರ್ಶೆಯ ಮಾನದಂಡಗಳಿಗಿಂತಾ ನಮ್ಮ ನಾಡಿನ ಬೇರುಗಳಾದ ‘ಭಾರತೀಯ ಕಾವ್ಯ ಮೀಮಾಂಸೆ‘ ಹಾಗೂ ‘ಸಹೃದಯದ ತತ್ವ‘ವೇ ದೇಸಿ ಸಾಹಿತ್ಯ ಸೃಜನೆಗಳನ್ನು ಅಳೆಯುವ ಸರಿಯಾದ ಅಳತೆಗೋಲುಗಳು ಎಂದು ಪ್ರಖರವಾಗಿ ನಂಬಿರುವವರು ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ದೊಡ್ಡರಂಗೇ ಗೌಡರು.
ಇಲ್ಲಿ ಕೃತಿಯ ರಸಸ್ವಾದವೇ ಮುಖ್ಯ. ರಸಾನಂದವನ್ನು ಅನುಭವಿಸಿದ ಸಹೃದಯ ಯಾವ ಯಾವ ಕಾರಣಗಳಿಂದ ಕೃತಿ ತನ್ನ ಮನೋಮಂಡಲದ ಮೇಲೆ ಪ್ರಭಾವ ಬೀರಿತು ಎಂಬ ವಾಸ್ತವಾಂಶಗಳಿಗೆ ಸಮರ್ಥ ಅಭಿವ್ಯಕ್ತಿಯನ್ನು ನೀಡಿದ್ದಾರೆ ಇಲ್ಲಿನ ಲೇಖನಗಳಲ್ಲಿ.
ಹೀಗಾಗಿ ಅಭಿವ್ಯಕ್ತಿಯ ಹಿಂದಿನ ರಸಾನುಭವಗಳನ್ನು ಕಟ್ಟಿ ಕೊಡುವ ಬರಹಗಳು ಇಲ್ಲಿ ಸಂಕಲಿತವಾಗಿರುವುದರಿಂದ ಕೃತಿಯ ಆಂತರ್ಯ ಓದುಗರಿಗೆ ಹೊಸ ಅನುಭವದ ಮುದವನ್ನು ನೀಡುತ್ತದೆ. ತನ್ಮೂಲಕ ರಸಾನಂದವೇ ಇಲ್ಲಿನ ಗುರಿಯಾಗಿದೆ.

– ಡಾ. ಟಿ.ಎಸ್. ವಿಶ್ವನಾಥ್

ಭಾವಬುತ್ತಿ

IMG_20140623_0001
ಚಟುವಟಿಕೆಯ ಚಿಲುಮೆಯಾಗಿ ಬೆಳೆದ ಕೆ. ರಾಜೇಶ್ವರಿ ಗೌಡ ಅವರು ಉತ್ತಮ ಅಧ್ಯಾಪಕಿಯಾಗಿ, ವಾಕ್ಪಟುತ್ವದ ವ್ಯಕ್ತಿಯಾಗಿ, ಸಾಹಿತಿಯಾಗಿ, ಕವಿಯಾಗಿ, ಪ್ರವಾಸ ಕಥನಗಾರ್ತಿಯಾಗಿ… ಸಾಹಿತ್ಯ ವಲಯದಲ್ಲಿ ತಮ್ಮನ್ನು ದಾಖಲಿಸಿಕೊಂಡಿದ್ದಾರೆ.
ಮನುಜ ಪ್ರೀತಿಯ ನೆಲೆಯಲ್ಲಿ, ಹೆಣ್ಣಿನ ಅಂತರಂಗದ ತುಡಿತದಲ್ಲಿ ಅರಳಿರುವ ಅವರ ಕವನಗಳು ನಿರಾಡಂಬರ, ಸರಳ, ಸುಂದರ.
ಕಾಲದ ಅಂತರದಲ್ಲಿ ಕಡೆದು ನಿಲ್ಲಿಸುವ ಅವರ ನುಡಿ-ಚಿತ್ರಗಳು ವಿಸ್ಮಯ ಮೂಡಿಸುತ್ತವೆ. ಅವರ ದಟ್ಟು ಅನುಭವದ ಅಭಿವ್ಯಕ್ತಿ ಪರಿಣಾಮಕಾರಿಯಾಗಿದೆ.
‘ಭಾವಬುತ್ತಿ‘ಯಲ್ಲಿನ ಕವನಗಳು ಸ್ತ್ರೀಕೇಂದ್ರಿತ ನೆಲೆಯಲ್ಲಿಯೇ ಹೆಚ್ಚಾಗಿ ವಿಹರಿಸುತ್ತವೆ. ಜಗತ್ತಿನ ಅನೇಕ ವಿಸ್ಮಯದ ಸಂಗತಿಗಳನ್ನು ಇಲ್ಲಿನ ಕವನಗಳು ಧ್ವನಿಸುತ್ತವೆ.

– ಡಾ. ಕಮಲ ಹಂಪನ

ಯುಗವಾಣಿ

yuga_vaniನಾನು ಯಾವ ಗಳಿಗೆ ಭಾವನಾತ್ಮಕವಾಗಿ ಹಾಡಿಕೊಳ್ಳಲು ಪ್ರಾರಂಭಿಸಿದೆನೋ, ಖಂಡಿತಾ ಅರಿಯಲಾರೆ ! ಅಂದಿನಿಂದ ಇಂದಿನ ತನಕ ಹಾಡಿಕೊಳ್ಳುತ್ತಲೇ ಬಂದಿದ್ದೇನೆ.

ಹಾಡು ನನ್ನ ಜೀವನದ ಅನಿವಾರ್ಯ ಭಾವಗಂಗೆ. ಹರಿಯುತ್ತಲೇ ಇದೆ, ನಿರಂತರ. ಯಾರೂ, ಕಲಿತ ಮತುಗಳನ್ನೆಲ್ಲ ಬರೆಯುವುದಿಲ್ಲ. ಬರೆದರೂ ಅವು ಹಾಡುಗಳು ಆಗುವುದಿಲ್ಲ!

ಹಾಡಲ್ಲಿ ಪಾಡಿದೆ, ಕವಿ ಜೀವನದ ಏರಿಳಿತದ ಜಾಡಿದೆ. ನೋಡಿದ್ದೂ, ಕೂಡಿದ್ದೂ ಬಾಡಿದ್ದೂ, ಬೇಡಿದ್ದೂ, ತೀಡಿದ್ದೂ, ತಿದ್ದಿದ್ದೂ, ಎದ್ದದ್ದೂ, ಬಿದ್ದದ್ದೂ, ಗುದ್ದಿದ್ದೂ… ಎಲ್ಲಾ… ಎಲ್ಲವೂ ಅಲ್ಲಿ ಕವಿಗೆ ಅರಿವಿಲ್ಲದೆ ಮನದ ಒಳಗಿನೊಳಗಿನ ಪಾತಳಿಯಲ್ಲಿ ಅನುಭವವಾಗಿ ಬೆರೆತಿರುತ್ತವೆ.

ನಾನು ಮೂಡುವ – ಮುಳುಗುವ ರವಿಯಲ್ಲಿ, ಬೆಳಗುವ ಚಂದ್ರನಲ್ಲಿ, ಹೊಳೆಯುವ ಚುಕ್ಕಿಗಳಲ್ಲಿ, ಬೀಸುವ ಗಾಳಿಯಲ್ಲಿ, ಹರಿಯುವ ನದಿಯಲ್ಲಿ, ಸುಮ್ಮನೆ ಧ್ಯಾನಸ್ಥವಾಗಿ ಕುಳಿತ ಬೆಟ್ಟಗುಡ್ಡಗಳ ಪ್ರಶಾಂತ ಭಂಗಿಗಳಲ್ಲಿ… ಅತ್ಯತ್ತಮವಾದ ಭಾವನಾತ್ಮಕವಾದ ಹಾಡುಗಳ ಕಂಡುಕೊಂಡೆ.

ಈಗಲೂ ನನ್ನ ಹುಡುಕಾಟ ನಡೆದೇ ಇದೆ ! ಏನೆಂದರೆ, ಈಗ … ಮನೆಯಂಗಳದಲ್ಲಿ, ಮನೆಯೊಳಗೆ, ಬೀದಿಗಳಲ್ಲಿ …. ಪಾಡಿರುವುದು ನನಗೆ ಅರಿವಾದಾಗ ಹಾಡುಗಳ ಮರೆಯದೆ ಬರೆದಿಡುತ್ತೇನೆ.

ಮನಸ್ಸಿನಲ್ಲಿ ಮೂಡಿದ, ಮೂಡಿ ಮರೆತು ಹೋದ ಸಾಲುಗಳು ಅನೇಕ. ಎಷ್ಟೋ ವೇಳೆ ಅಪೂರ್ವ ಪಲ್ಲವಿಗಳು ಮನದಲ್ಲಿ ಪಲ್ಲವಿಸಿದಾಗ, ಬರೆದಿಡುವ ವ್ಯವಧಾನವಿಲ್ಲದೆ ಹೋದುದರಿಂದ, ಅವುಗಳು ಸಂಪೂರ್ಣ ಮರೆತು ಹೋಗಿವೆ.

ಮರೆತು ಹೋಗದೆ ಉಳಿದ …. ಪೆನ್ನು ಹಾಳೆಗಳಿಂದ ಆಕಾರ ಪಡೆದ … ಕೆಲವು ಪದ್ಯಗಳು ಮಾತ್ರ ಇಲ್ಲಿವೆ.

ಪ್ರಿಯ ಓದುಗರೇ, ಇವು ನಿಮಗಾಗಿ. ಹೃನ್ಮನ ಮುದಕ್ಕಾಗಿ…. ಒಬ್ಬ ಕವಿ ತನ್ನ ನಾಡಿನ ಜನರಿಗೆ ಇದಕ್ಕಿಂತ ಇನ್ನೇನು ತಾನೆ ಕೊಡಲು ಸಾಧ್ಯ ?

ಸಹೃದಯರೇ, ಸ್ಪಂದಿಸಿ… ಪ್ರತಿಕ್ರಿಯಿಸಿ…

ನಮ್ಮ ಪ್ರಿತಿಯ ಕನ್ನಡ

namma_preetiya_kannadaಕನ್ನಡ ಇಂದು ತನ್ನ ಅನಂತ ಆಯಾಮಗಳನ್ನು ವಿಸ್ತರಿಸಿಕೊಂಡು ವಿಶ್ವಮುಖಿಯಾಗಿದೆ. ನಾವು ಮನಸ್ಸು ಮಾಡಿದರೆ ಎಲ್ಲ ವ್ಯವಹಾರಗಳನ್ನು ಕನ್ನಡದಲ್ಲೇ ನಡೆಸಲು ಖಂಡಿತಾ ಸಾಧ್ಯ. ಅಭಿಮಾನ ಮುಖ್ಯ. ಎಲ್ಲಿ ಕನ್ನಡದ ಅಕ್ಕರೆ ಇರುತ್ತದೋ ಅಲ್ಲಿ ಕನ್ನಡದ ಮುನ್ನಡೆಯೂ ಸಾಧ್ಯವಾಗುತ್ತದೆ.

ಜನಮುಖಿಯಾದ ಕನ್ನಡ ಶಾಸ್ತ್ರಮುಖಿಯಾಗಿ, ಜ್ಞಾನಮುಖಿಯಾಗಿ, ಕಲಾಮುಖಿಯಾಗಿ, ಸಮಾಜಮುಖಿಯಾಗಿ ನಮ್ಮ ನಾಡಿನ ಅಂತರಂಗದಲ್ಲಿ…. ಕನ್ನಡಿಗರ ಹೃನ್ಮನಗಳಲ್ಲಿ ಬೆರೆತು ಹೋಗಿದೆ. ಇಂದು ನಮಗೆ ಸಂಕಲ್ಪ ಬಲ ಬೇಕಾಗಿದೆ.

ಜಾಗತೀಕರಣ ವಿಷಮ ಸಂದರ್ಭದಲ್ಲಿ ನಮ್ಮ ನಲ್ಮೆಯ ಕನ್ನಡ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಂಪನ್ನತೆಯನ್ನು ಪಡೆದಿದೆ. ಕನ್ನಡಿಗರಲ್ಲಿ ನೆಚ್ಚು, ಕೆಚ್ಚು, ಪ್ರೀತಿ, ಆತ್ಮ ವಿಶ್ವಾಸ ತುಂಬಿ ತುಳುಕಿದಾಗಲೇ ಕನ್ನಡ ಜಗದಗಲ, ಮುಗಿಲಗಲ ವ್ಯಾಪಿಸಿ ವಿಶ್ವಮಾನ್ಯವಾಗುವುದು. ಅಂಥ ದೃಢ ನಿಲುವನ್ನು ಕನ್ನಡಿಗರು ಎಂದೆಂದೂ ಪ್ರಕಟಿಸುವ ಅಗತ್ಯವಿದೆ. ಆ ದಿಸೆಯಲ್ಲಿ ನಮ್ಮ ಪ್ರೀತಿ ಕನ್ನಡ ನಿಮಗೆ ಚಿರಂತನ ಸ್ಫೂರ್ತಿಯನ್ನು ನೀಡಬಲ್ಲುದು.

– ಡಾ. ದೊಡ್ಡರಂಗೇಗೌಡ